ಇಸ್ರೋ ವಿಜ್ಞಾನಿಗಳಿಗೆ ವೇತನ ಕಡಿಮೆ, ಆದರೂ ತಮ್ಮ ಗುರಿಗೆ ಅವರು ಬದ್ಧ: ಮಾಜಿ ಮುಖ್ಯಸ್ಥ ಜಿ ಮಾಧವನ್ ನಾಯರ್

ಭಾರತದ ಯಶಸ್ವಿ ಚಂದ್ರಯಾನ-3 ಮಿಷನ್‌ನ ನಂತರ ಇಸ್ರೊ ವಿಜ್ಞಾನಿಗಳ ವೇತನ ಬಗ್ಗೆ ಚರ್ಚೆಯಾಗುತ್ತಿದೆ. ಈ ಮಧ್ಯೆ ಇಸ್ರೋ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್ ಒಂದು ಹೇಳಿಕೆ ನೀಡಿದ್ದು, ಇಸ್ರೊ ವಿಜ್ಞಾನಿಗಳು ಅಭಿವೃದ್ಧಿ ಹೊಂದಿದ ಬೇರೆ ದೇಶಗಳ ವಿಜ್ಞಾನಿಗಳ ಐದನೇ ಒಂದು ಭಾಗದಷ್ಟು ವೇತನ ಪಡೆಯುತ್ತಾರೆ ಎಂಬ ವಾಸ್ತವ ಸಂಗತಿಯನ್ನು ತೆರೆದಿಟ್ಟಿದ್ದಾರೆ. 
ಚಂದ್ರಯಾನ-3ರ ಯಶಸ್ಸನ್ನು ಸಂಭ್ರಮಿಸುತ್ತಿರುವ ಇಸ್ರೊ ವಿಜ್ಞಾನಿಗಳು
ಚಂದ್ರಯಾನ-3ರ ಯಶಸ್ಸನ್ನು ಸಂಭ್ರಮಿಸುತ್ತಿರುವ ಇಸ್ರೊ ವಿಜ್ಞಾನಿಗಳು

ಬೆಂಗಳೂರು: ಭಾರತದ ಯಶಸ್ವಿ ಚಂದ್ರಯಾನ-3 ಮಿಷನ್‌ನ ನಂತರ ಇಸ್ರೊ ವಿಜ್ಞಾನಿಗಳ ವೇತನ ಬಗ್ಗೆ ಚರ್ಚೆಯಾಗುತ್ತಿದೆ. ಈ ಮಧ್ಯೆ ಇಸ್ರೋ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್ ಒಂದು ಹೇಳಿಕೆ ನೀಡಿದ್ದು, ಇಸ್ರೊ ವಿಜ್ಞಾನಿಗಳು ಅಭಿವೃದ್ಧಿ ಹೊಂದಿದ ಬೇರೆ ದೇಶಗಳ ವಿಜ್ಞಾನಿಗಳ ಐದನೇ ಒಂದು ಭಾಗದಷ್ಟು ವೇತನ ಪಡೆಯುತ್ತಾರೆ ಎಂಬ ವಾಸ್ತವ ಸಂಗತಿಯನ್ನು ತೆರೆದಿಟ್ಟಿದ್ದಾರೆ. 

ಅಷ್ಟೇ ಅಲ್ಲದೆ, ಅವರ ಪ್ರಕಾರ, ಇಸ್ರೋ ವಿಜ್ಞಾನಿಗಳಿಗೆ ಕಡಿಮೆ ವೇತನ ಸಿಗುವುದರಿಂದ ಬಾಹ್ಯಾಕಾಶ ಪರಿಶೋಧನೆಗೆ ಕಡಿಮೆ ವೆಚ್ಚದ ಪರಿಹಾರಗಳನ್ನು ಅವರು ಕಂಡುಕೊಳ್ಳುತ್ತಾರೆ ಎನ್ನುತ್ತಾರೆ. 

"ಇಸ್ರೋದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಇತರ ಸಿಬ್ಬಂದಿಗೆ ಪಾವತಿಸುವ ವೇತನವು ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳಿಗೆ ನೀಡಲಾಗುವ ಐದನೇ ಒಂದು ಭಾಗದಷ್ಟು ಇರುತ್ತದೆ. ಇದು ಪರೋಕ್ಷವಾಗಿ ಸಂಸ್ಥೆಗೆ, ಸರ್ಕಾರಕ್ಕೆ ಪ್ರಯೋಜನವಾಗುತ್ತದೆ ಎನ್ನುತ್ತಾರೆ. 

ಇಸ್ರೊ ವಿಜ್ಞಾನಿಗಳು ಮಿಲಿಯನೇರ್ ಗಳಲ್ಲ: ಇಸ್ರೋ ವಿಜ್ಞಾನಿಗಳಲ್ಲಿ ಮಿಲಿಯನೇರ್ ಗಳು ಯಾರೂ ಇಲ್ಲ ಮತ್ತು ಅವರು ಯಾವಾಗಲೂ ತುಂಬಾ ಸಾಮಾನ್ಯ ಮತ್ತು ಸರಳ ಬದುಕು ನಡೆಸುತ್ತಿರುತ್ತಾರೆ. ಇಸ್ರೊದಲ್ಲಿನ ವಿಜ್ಞಾನಿಗಳು ವಾಸ್ತವವಾಗಿ ಹೇಳಬೇಕೆಂದರೆ ತಮ್ಮ ವೇತನ ಬಗ್ಗೆ  ನಿಜವಾಗಿಯೂ ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ದೇಶಕ್ಕಾಗಿ ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಹೀಗಾಗಿಯೇ ನಾವು ಇಂದು ಇಷ್ಟು ಮಹತ್ತರವಾದದ್ದನ್ನು ಸಾಧಿಸಿದ್ದೇವೆ ಎನ್ನುತ್ತಾರೆ. 

ಅತಿ ಎಚ್ಚರಿಕೆಯಿಂದ ಯೋಜನೆ ಕೈಗೊಳ್ಳುವುದು ಮತ್ತು ದೀರ್ಘಾವಧಿಯ ದೃಷ್ಟಿಕೋನದಿಂದ ಇಸ್ರೊ ವಿಜ್ಞಾನಿಗಳು ಸಾಧನೆ ಮಾಡಬಹುದಾಗಿದೆ ಎಂದರು. ಇಸ್ರೊ ವಿಜ್ಞಾನಿಗಳು ಒಂದರ ಮೇಲೆ ಒಂದನ್ನು ನಿರ್ಮಿಸಲು ಪ್ರಯತ್ನಿಸಿದ್ದೇವೆ. ಹಿಂದೆ ಕಲಿತದ್ದನ್ನು ಆದ ಅನುಭವಗಳನ್ನು ನಂತರದ ಕಾರ್ಯಾಚರಣೆಗೆ ಬಳಸಿದ್ದೇವೆ. ವಾಸ್ತವವಾಗಿ, ನಾವು ಸುಮಾರು 30 ವರ್ಷಗಳ ಹಿಂದೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ಗಾಗಿ ಅಭಿವೃದ್ಧಿಪಡಿಸಿದ ಅದೇ ಎಂಜಿನ್ ನ್ನು ಜಿಎಸ್ ಎಲ್ ವಿ ಕಾರ್ಯಾಚರಣೆಗೂ ಬಳಸಲಾಗಿದೆ ಎನ್ನುತ್ತಾರೆ. 

ಭಾರತವು ತನ್ನ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಸ್ವದೇಶಿ ತಂತ್ರಜ್ಞಾನವನ್ನು ಬಳಸುತ್ತದೆ. ಇದು ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡಿದೆ. ಇತರ ದೇಶಗಳ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಹೋಲಿಸಿದರೆ ಭಾರತದ ಬಾಹ್ಯಾಕಾಶ ಮಿಷನ್ ವೆಚ್ಚವು ಶೇಕಡಾ 50ರಿಂದ 60ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಚಂದ್ರಯಾನ-3 ರ ಯಶಸ್ಸು ಭಾರತದ ಗ್ರಹಗಳ ಅನ್ವೇಷಣೆಯನ್ನು ಪ್ರಾರಂಭಿಸಲು ಮೊದಲ ಮೆಟ್ಟಿಲು ಎಂದು ಸಹ ಮಾಧವನ್ ನಾಯರ್ ಬಣ್ಣಿಸುತ್ತಾರೆ. ಭಾರತ ದೇಶವು ಈಗಾಗಲೇ ಯುರೋಪ್ ಮತ್ತು ಅಮೆರಿಕದೊಂದಿಗೆ ಹಲವಾರು ವಾಣಿಜ್ಯ ಒಪ್ಪಂದಗಳನ್ನು ಹೊಂದಿದೆ. ಇದು ಈಗ ಚಂದ್ರಯಾನ-3 ರ ಯಶಸ್ಸಿನೊಂದಿಗೆ ಬೆಳೆಯುತ್ತದೆ ಎಂದು ಸಹ ಹೇಳಿದರು. 

ಚಂದ್ರಯಾನ-3ಕ್ಕೆ ತಗುಲಿದ ವೆಚ್ಚವೆಷ್ಟು?: ಇಸ್ರೋ ಪ್ರಕಾರ ಚಂದ್ರಯಾನ-3 ರ ಒಟ್ಟು ವೆಚ್ಚ ಕೇವಲ 615 ಕೋಟಿ ರೂಪಾಯಿಗಳು, ಇದು ಇಂದು ಒಂದು ದುಬಾರಿ ಬಾಲಿವುಡ್ ಅಥವಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುವ ಚಲನಚಿತ್ರ ನಿರ್ಮಾಣದ ಬಜೆಟ್‌ಗೆ ಸಮನಾಗಿದೆ, ಅಂದರೆ ಇಲ್ಲಿ ಇಸ್ರೊ ವಿಜ್ಞಾನಿಗಳ ಸರಳ ಕೆಲಸದ ಮೇಲಿನ ಆಸಕ್ತಿ, ನಿಷ್ಠೆಯನ್ನು ತೋರಿಸುತ್ತದೆ ಎನ್ನುತ್ತಾರೆ ಮಾಜಿ ಅಧ್ಯಕ್ಷರು. 

ಚಂದ್ರನ ದಕ್ಷಿಣ ಧ್ರುವಕ್ಕೆ ತೆರಳುತ್ತಿದ್ದ ರಷ್ಯಾದ ಲ್ಯಾಂಡರ್ ಅಪಘಾತಕ್ಕೀಡಾದ ಒಂದು ವಾರದ ನಂತರ, ಭಾರತವು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ದೇಶವಾಗಿದೆ. ಇದಕ್ಕಿಂತ ಮೊದಲು ಅಮೆರಿಕ, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟಗಳು ಚಂದ್ರನ ಮೇಲೆ ಇಳಿದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com