'ಕೈ' ಹಿಡಿಯದ ಹಿಂದಿ ಭಾಷಿಕರು, ಗ್ಯಾರಂಟಿಗಳಿಗೆ ಮನಸೋಲದ ಮತದಾರರು, ತೆಲಂಗಾಣಕ್ಕೆ ತೃಪ್ತಿ!

ಹಿಂದಿ ಭಾಷಿಕರ ಹೃದಯ ಭಾಗದಲ್ಲಿ ಕಾಂಗ್ರೆಸ್ ಈ ಬಾರಿ ಸ್ಪಷ್ಟವಾಗಿ ಜನಾದೇಶ ಕಳೆದುಕೊಂಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ತನ್ನ ನಾಲ್ಕನೇ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್ ಮಧ್ಯ ಪ್ರದೇಶದಲ್ಲಿ ಜನಮಾನಸದಿಂದ ದೂರವಾಗಿದೆ ಎನ್ನಬಹುದು. 
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ

ನವದೆಹಲಿ/ತೆಲಂಗಾಣ: ಹಿಂದಿ ಭಾಷಿಕರ ಹೃದಯ ಭಾಗದಲ್ಲಿ ಕಾಂಗ್ರೆಸ್ ಈ ಬಾರಿ ಸ್ಪಷ್ಟವಾಗಿ ಜನಾದೇಶ ಕಳೆದುಕೊಂಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ತನ್ನ ನಾಲ್ಕನೇ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ಕಾಂಗ್ರೆಸ್ ಮಧ್ಯ ಪ್ರದೇಶದಲ್ಲಿ ಜನಮಾನಸದಿಂದ ದೂರವಾಗಿದೆ ಎನ್ನಬಹುದು. 

ಹಾಲಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಮತ್ತು ಬಿಜೆಪಿ ರಾಜ್ಯದಲ್ಲಿ ಕ್ಲೀನ್ ಸ್ವೀಪ್ ಕಡೆಗೆ ಸಾಗಿ ಕಾಂಗ್ರೆಸ್ ನ್ನು ಸೋಲಿಸಿದ್ದಾರೆ. ಅಸೆಂಬ್ಲಿ ಚುನಾವಣೆಯ ಫಲಿತಾಂಶಗಳು ಬರುತ್ತಿದ್ದಂತೆ, ರಾಜಸ್ಥಾನದಲ್ಲಿ ಈ ಬಾರಿ ಆಡಳಿತಾರೂಢ ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ, ಇನ್ನು ಛತ್ತೀಸ್‌ಗಢದಲ್ಲಿ ಕೂಡ ಬಿಜೆಪಿ ಕಾಂಗ್ರೆಸ್ ನ್ನು ಹಿಮ್ಮೆಟ್ಟಿಸಲು ಸಜ್ಜಾಗಿದೆ. 

ಮೂರು ರಾಜ್ಯಗಳಲ್ಲಿ ಸೋಲುವ ಭೀತಿ ದಟ್ಟವಾಗಿರುವ ಕಾಂಗ್ರೆಸ್ ಗೆ ತೆಲಂಗಾಣದಲ್ಲಿ ಮಾತ್ರ ಬೆಳಕಿನ ಬೆಳ್ಳಿರೇಖೆ ಮೂಡಿದೆ. ಏಕಾಂಗಿಯಾಗಿ ಸರ್ಕಾರ ರಚಿಸಲು ಸಜ್ಜಾಗಿರುವ ಕಾಂಗ್ರೆಸ್‌ಗೆ ಇಲ್ಲಿನ ಫಲಿತಾಂಶ ಸಂತಸ ಮೂಡಿಸುವಂತಿದೆ. 

ಮಧ್ಯ ಪ್ರದೇಶದಲ್ಲಿ ಆಗಿದ್ದೇನು?: ಮಧ್ಯ ಪ್ರದೇಶದಲ್ಲಿ ಪ್ರಮುಖ ನಾಯಕರಾದ 78 ವರ್ಷದ ಕಮಲ್ ನಾಥ್ ಮತ್ತು 76 ವರ್ಷದ ದಿಗ್ವಿಜಯ ಸಿಂಗ್ ಅವರಿಗೆ ಸಂಪೂರ್ಣ ನಿಯಂತ್ರಣವನ್ನು ನೀಡಿದ ಕಾಂಗ್ರೆಸ್‌ಗೆ ಬಿಜೆಪಿಯ ಸಾಮಾಜಿಕ ಯೋಜನೆ ಸೂತ್ರಗಳ ಮುಂದೆ ರಾಜಕೀಯ ಲೆಕ್ಕಾಚಾರಗಳು ನಡೆಯಲಿಲ್ಲ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿಯು ಕೇಂದ್ರ ಮಂತ್ರಿಗಳು ಮತ್ತು ಲೋಕಸಭಾ ಸಂಸದರನ್ನು ರಾಜಕೀಯ ಅಖಾಡಕ್ಕೆ ಇಳಿಸುವ ಮೂಲಕ ಸಂಸದೀಯ ಚುನಾವಣೆಗೆ ತನ್ನೆಲ್ಲ ಶಕ್ತಿಯನ್ನು ಹಾಕಿತ್ತು. ಕಾಂಗ್ರೆಸ್ ತನ್ನ 11 ಭರವಸೆಗಳ ಸುತ್ತವೇ ಸುತ್ತಿಕೊಂಡಿತ್ತು. ಇದರಲ್ಲಿ ಹಲವಾರು ಉಚಿತ ಕೊಡುಗೆಗಳು ಸೇರಿದ್ದವು, ಆದರೆ ಬಿಜೆಪಿಯು ಈಗಾಗಲೇ ಜನರಿಗೆ ಹಲವಾರು ಸಾಮಾಜಿಕ ಯೋಜನೆಗಳ ವಿಶೇಷವಾಗಿ 'ಲಾಡ್ಲಿ ಬೆಹ್ನಾ' ಯೋಜನೆಯ ಲಾಭವನ್ನು ನೀಡುವುದರೊಂದಿಗೆ ಮಹಿಳಾ ಮತದಾರರು ಬಿಜೆಪಿಯ ಕೈಹಿಡಿದರು. 

ಮಧ್ಯ ಪ್ರದೇಶದಲ್ಲಿ ಕೇವಲ ಒಂದು ಲೋಕಸಭಾ ಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕೇವಲ ಎರಡನ್ನು ಹೊಂದಿದ್ದ ಕಾಂಗ್ರೆಸ್‌ಗೆ ಈಗ ಹಿಂದಿ ಭಾಷಿಕರ ಹೃದಯಭಾಗದಲ್ಲಿ ಅವರ ಮನಸ್ಸಿನಿಂದ ದೂರವಾಗುತ್ತಿದೆ ಎನ್ನಬಹುದು. 

ಮೂರು ರಾಜ್ಯಗಳನ್ನು ಕಳೆದುಕೊಳ್ಳುತ್ತಿರುವುದು ಕಾಂಗ್ರೆಸ್‌ಗೆ ತೀವ್ರ ಆತಂಕ ತಂದಿದೆ ಎಂದರೆ ಇಲ್ಲಿ ಕಾಂಗ್ರೆಸ್‌ನ ಚುನಾವಣಾ ಅಸ್ತ್ರವಾಗಿದ್ದ 'ಜಾತಿ ಗಣತಿ'ಯನ್ನು ಮತದಾರ ಪರಿಗಣಿಸಲೇ ಇಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷ ಇದೇ ಮಾದರಿಯನ್ನೇ ಪಂಚ ರಾಜ್ಯ ಚುನಾವಣೆಯಲ್ಲೂ ಅನುಸರಿಸಿತ್ತು. ಚುನಾವಣೆ ನಡೆದ ಐದೂ ರಾಜ್ಯಗಳ ಪೈಕಿ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷ ಆಯಾ ರಾಜ್ಯಗಳ ಸ್ಥಿತಿಗತಿಗೆ ಅನುಗುಣವಾಗಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಆದರೆ, ಮತದಾರ ಗ್ಯಾರಂಟಿಗಳಿಗೆ ಮನ ಸೋತಿಲ್ಲ ಅನ್ನೋದು ಚುನಾವಣೆ ಫಲಿತಾಂಶದಲ್ಲಿ ವ್ಯಕ್ತವಾಗ್ತಿದೆ. ರಾಜಸ್ಥಾನ, ಮಧ್ಯ ಪ್ರದೇಶ ಮಾತ್ರವಲ್ಲ, ಛತ್ತೀಸ್‌ಗಢ ರಾಜ್ಯದಲ್ಲೂ ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡಿ ಬಿಜೆಪಿ ಮುನ್ನಡೆ ಸಾಧಿಸಿದೆ. 

ಹಾಗೆ ನೋಡಿದರೆ ಬಿಜೆಪಿ ಕೂಡಾ ಈ ಎಲ್ಲಾ ರಾಜ್ಯಗಳಲ್ಲೂ ಹಲವು ಯೋಜನೆಗಳ ಪ್ರಕಟಿಸಿತ್ತು. ಮಧ್ಯ ಪ್ರದೇಶ, ರಾಜಸ್ಥಾನದಲ್ಲಂತೂ ಕಾಂಗ್ರೆಸ್ ಗ್ಯಾರಂಟಿಗಳ ಜೊತೆ ಬಿಜೆಪಿ ಪೈಪೋಟಿ ನಡೆಸಿತ್ತು. ಇದೀಗ ಮತದಾರ ಬಿಜೆಪಿ ಗ್ಯಾರಂಟಿಗೇ ಕೈ ಹಿಡಿದಿದ್ದಾನೆ.

ಆದರೆ, ತೆಲಂಗಾಣ ರಾಜ್ಯ ಮಾತ್ರ ಈ ವಿಚಾರದಲ್ಲಿ ಭಿನ್ನವಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆಯಾದರೂ, ಗ್ಯಾರಂಟಿಗಳಿಗಿಂತ ಹೆಚ್ಚಾಗಿ ತೆಲಂಗಾಣದ ರಾಜಕೀಯ ಪರಿಸ್ಥಿತಿಯೇ ಕಾಂಗ್ರೆಸ್‌ ಮೇಲುಗೈ ಸಾಧಿಸಲು ಕಾರಣ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com