ರಾಜಸ್ತಾನದಲ್ಲಿ ನಳನಳಿಸುತ್ತಿದೆ 'ನಾರಿ ಶಕ್ತಿ': ಬರೋಬ್ಬರಿ 20 ಮಹಿಳಾ ಅಭ್ಯರ್ಥಿಗಳ ಗೆಲುವು!

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ 50 ಮಹಿಳಾ ಅಭ್ಯರ್ಥಿಗಳ ಪೈಕಿ 20 ಮಂದಿ ಗೆಲುವು ಸಾಧಿಸಿದ್ದಾರೆ.  ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಂಬತ್ತು ಮತ್ತು ಇಬ್ಬರು ಪಕ್ಷೇತರ ಮಹಿಳಾ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
ವಸುಂದರಾ ರಾಜೇ
ವಸುಂದರಾ ರಾಜೇ

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ 50 ಮಹಿಳಾ ಅಭ್ಯರ್ಥಿಗಳ ಪೈಕಿ 20 ಮಂದಿ ಗೆಲುವು ಸಾಧಿಸಿದ್ದಾರೆ.  ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಂಬತ್ತು ಮತ್ತು ಇಬ್ಬರು ಪಕ್ಷೇತರ ಮಹಿಳಾ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.

ಈ ಬಾರಿ ಬಿಜೆಪಿಯ ದಿಯಾ ಕುಮಾರಿ ಅವರು ಕಾಂಗ್ರೆಸ್‌ನ ಸೀತಾರಾಮ್ ಅಗರ್ವಾಲ್ ವಿರುದ್ಧ 71,368 ಮತಗಳ ಅಂತರದಿಂದ ಗೆದ್ದಿರುವುದು ವಿಶೇಷ. ಝಲರಾಪಾಟನ ಕ್ಷೇತ್ರದಲ್ಲಿ ಮಾಜಿ ಸಿಎಂ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ತಮ್ಮ ಪ್ರತಿಸ್ಪರ್ಧಿ ರಾಮಲಾಲ್ ಚೌಹಾಣ್ ವಿರುದ್ಧ 51,193 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ರಾಜಸ್ಥಾನದಲ್ಲಿ ವಿಧಾನಸಭೆಯ 200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ನವೆಂಬರ್ 25ರಂದು ಚುನಾವಣೆ ನಡೆದಿತ್ತು. ಭಾನುವಾರ ನಡೆದ ಮತ ಎಣಿಕೆಯಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇತ್ತ 69 ಸ್ಥಾನಗಳಲ್ಲಿ ಕಾಂಗ್ರೆಸ್‌, 14 ಕ್ಷೇತ್ರಗಳಲ್ಲಿ ಇತರೆ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ.

ಬಿಜೆಪಿ 20 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು (ಒಟ್ಟು ಅಭ್ಯರ್ಥಿಗಳ ಶೇಕಡ 10ರಷ್ಟು). ಇತ್ತ ಕಾಂಗ್ರೆಸ್ 28 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿತ್ತು (ಒಟ್ಟು ಅಭ್ಯರ್ಥಿಗಳ ಶೇಕಡ 14ರಷ್ಟು).

ಈ ಬಾರಿ ಚುನಾವಣೆಯಲ್ಲಿ ಶೇ.74.72ರಷ್ಟು ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇತ್ತ ಪುರುಷ ಮತದಾರರು ಶೇ.74.53ರಷ್ಟು ಮತದಾನ ಮಾಡಿದ್ದರು. 2018ರಲ್ಲಿ ಮಹಿಳಾ ಮತದಾರರು ಪ್ರಮಾಣ ಶೇ 74.66 ರಷ್ಟಿದ್ದು, ಶೇ 73.80ರಷ್ಟು ಪುರುಷ ಮತದಾರರಿದ್ದರು.

2018ರಲ್ಲಿ ಕಾಂಗ್ರೆಸ್ 23 ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಬಿಜೆಪಿ 24 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 12, ಬಿಜೆಪಿಯಿಂದ 10 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ವಿಧಾನಸಭೆ ಪ್ರವೇಶಿಸಿದ್ದರು.

ಗೆದ್ದ ಒಂಬತ್ತು ಕಾಂಗ್ರೆಸ್ ಅಭ್ಯರ್ಥಿಗಳೆಂದರೆ ಶಿಮ್ಲಾ ದೇವಿ (ಅನುಪುಗಢ), ಸುಶೀಲಾ ದುಡಿ (ನೋಖಾ), ರೀಟಾ ಚೌಧರಿ (ಮಾಂಡವಾ), ಶಿಕಾ ಮೀಲ್ ಬರಾಲಾ (ಚೋಮು), ಶೋಭಾರಾಣಿ ಕುಶ್ವಾಹ್ (ಧೋಲ್ಪುರ್), ಅನಿತಾ ಜಾತವ್ (ಹಿಂದೌನ್), ಇಂದ್ರ (ಬಮನ್ವಾಸ್), ಗೀತಾ ಬರ್ವಾರ್. (ಭೋಪಾಲ್ಗಢ), ಮತ್ತು ರಮಿಲಾ ಖಾಡಿಯಾ (ಕುಶಾಲ್ಗಢ).

ಬಿಜೆಪಿಯ ಮಹಿಳಾ ಅಭ್ಯರ್ಥಿಗಳೆಂದರೆ ದಿಯಾ ಕುಮಾರಿ (ವಿದ್ಯಾಧರ್ ನಗರ), ಅನಿತಾ ಭಾದೆಲ್ (ಅಜ್ಮೀರ್ ಸೌತ್), ಮಂಜು ಬಾಗ್ಮಾರ್ (ಜಯಾಲ್), ಶೋಭಾ ಚೌಹಾಣ್ (ಸೋಜತ್), ದೀಪ್ತಿ ಕಿರಣ್ ಮಹೇಶ್ವರಿ (ರಾಜಸಮಂದ್), ಕಲ್ಪನಾ ದೇವಿ (ಲಾದ್‌ಪುರ), ವಸುಂಧರಾ ರಾಜೇ ( ಝಲ್ರಾಪಟನ್), ಸಿದ್ಧಿ ಕುಮಾರಿ (ಬಿಕಾನೇರ್ ಪೂರ್ವ), ನೌಕ್ಷಮ್ ಚೌಧರಿ (ಕಮಾನ್).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com