ಮಿಚಾಂಗ್ ಚಂಡಮಾರುತ: ಮುಳುಗಿದ ಚೆನ್ನೈ, ವಿದ್ಯುತ್ ಸ್ಥಗಿತ; '2015ರ ಪ್ರವಾಹದ ನಂತರ ಅತಿ ದೊಡ್ಡ ಮಳೆ'
ಚೆನ್ನೈ: ಮಿಚಾಂಗ್ ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಅದರಲ್ಲೂ ಚೆನ್ನೈನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ರಾಜಧಾನಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಇಂದು ಚೆನ್ನೈನಲ್ಲಿ ಸುರಿದ ಮಳೆಯು 2015ರ ಪ್ರವಾಹದ ನಂತರ ಸುರಿದ "ಅ ತಿದೊಡ್ಡ ಮಳೆ"ಯಾಗಿದೆ ಎಂದು ಸ್ವತಂತ್ರ ಹವಾಮಾನ ಮುನ್ಸೂಚಕ ತಮಿಳುನಾಡು ವೆದರ್‌ಮ್ಯಾನ್ ಹೇಳಿದೆ.
"ಬೆಳಗ್ಗೆ 8.30 ರಿಂದ ಮಳೆ ನಿರಂತವಾಗಿ ಸುರಿಯುತ್ತಿದೆ. ಇದು ಹೀಗೆ ಮುಂದುವರೆದರೆ 24 ಗಂಟೆಗಳಲ್ಲಿ ಮಳೆ 300 ಮಿಲಿ ಮೀಟರ್ ಗೂ ಹೆಚ್ಚಾಗಿರುತ್ತದೆ" ಎಂದು ವೆದರ್‌ಮ್ಯಾನ್ ಪ್ರದೀಪ್ ಜಾನ್ ಅವರು ತಿಳಿಸಿದ್ದಾರೆ.
ಸೋಮವಾರ ತಡರಾತ್ರಿಯವರೆಗೂ ಮಳೆ ಬೀಳಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದು, ಸಹಜ ಸ್ಥಿತಿಗೆ ಮರಳಲು ಸ್ವಲ್ಪ ಸಮಯ ಹಿಡಿಯಲಿದೆ.
ಚೆಂಗಲುಟ್ಟುವಿನಲ್ಲಿ ಇಬ್ಬರು ಸೇರಿದಂತೆ ಮಳೆ ಸಂಬಂಧಿ ಅವಘಡದಿಂದ ಚೆನ್ನೈನಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಚೆನ್ನೈನ ವಿಮಾನ ನಿಲ್ದಾಣ ಸೇರಿದಂತೆ ಬಹುತೇಕ ಭಾಗಗಳು ಜಲಾವೃತವಾಗಿವೆ. ರೈಲು-ವಿಮಾನ ಸಂಚಾರ ಸಹ ಸ್ಥಗಿತಗೊಂಡಿದೆ.
ಮಿಚಾಂಗ್ ಚಂಡಮಾರುತದ ಪರಿಣಾಮ ತಮಿಳುನಾಡಿನ ಹಲವು ಭಾಗಗಳಲ್ಲಿ ಡಿಸೆಂಬರ್ 5ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಕೆ ನೀಡಿದೆ.
ರಾಜಧಾನಿ ಚೆನ್ನೈ, ತಿರುವಲ್ಲೂರು, ಚೆಂಗಲ್‌ಪಟ್ಟು ಮತ್ತು ಕಾಂಚೀಪುರಂ ಜಿಲ್ಲಾಡಳಿತಗಳು ಇಂದು (ಸೋಮವಾರ) ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ