ಅತ್ತಿಗೆ ಜೊತೆಗಿನ ಅಕ್ರಮ ಸಂಬಂಧ ಪ್ರಶ್ನಿಸಿದ ಸಹೋದರಿಯನ್ನೇ ಸ್ನೇಹಿತರ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ, ಹತ್ಯೆ

ಅತ್ತಿಗೆ ಜೊತೆಗಿನ ಅಕ್ರಮ ಸಂಬಂಧ ಪ್ರಶ್ನಿಸಿದ ಸಹೋದರಿಯನ್ನೇ ಪಾಪಿ ಸಹೋದರನೋರ್ವ ತನ್ನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆಗೈದಿರುವ ಪೈಶಾಚಿಕ ಘಟನೆ ಒಡಿಶಾದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಭುವನೇಶ್ವರ್: ಅತ್ತಿಗೆ ಜೊತೆಗಿನ ಅಕ್ರಮ ಸಂಬಂಧ ಪ್ರಶ್ನಿಸಿದ ಸಹೋದರಿಯನ್ನೇ ಪಾಪಿ ಸಹೋದರನೋರ್ವ ತನ್ನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆಗೈದಿರುವ ಪೈಶಾಚಿಕ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ತನ್ನ ಸಹೋದರಿಯ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ನವೆಂಬರ್ 3 ರಂದು ಚಕಪಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ, ಆದರೆ ಪೊಲೀಸರು ಪ್ರಕರಣವನ್ನು ಭೇದಿಸಿದ ನಂತರ ಕೊಲೆ ಹಿಂದಿನ ಕಾರಣ ಬಯಲಾಗಿದೆ. ಪ್ರಸ್ತುತ ಪೊಲೀಸರು ವ್ಯಕ್ತಿ ಮತ್ತು ಅವನ ಸ್ನೇಹಿತರನ್ನು ಶನಿವಾರ ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಆರೋಪಿ ವ್ಯಕ್ತಿ ಸಂಬಂಧದಲ್ಲಿ ಅತ್ತೆಗೆ (ಸಹೋದರನ ಪತ್ನಿ)ಯಾಗಬೇಕಿದ್ದ 25 ವರ್ಷದ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಆತನ ಸಹೋದರಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಳು. ಅಲ್ಲದೆ ಅದನ್ನು ನಿಲ್ಲಿಸುವಂತೆ ಇಲ್ಲದಿದ್ದರೆ ನಿನ್ನ ಅಕ್ರಮ ಸಂಬಂಧ ವಿಚಾರ ಬಹಿರಂಗಪಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ ಆಕೆಗೆ ತಿಳಿದ ವಿಚಾರ ಮುಂದೊಂದು ದಿನ ಯಾರಿಗಾದರೂ ತಿಳಿಯುತ್ತದೆ ಎಂದು ಭಾವಿಸಿ ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ.

ಅದರಂತೆ ತನ್ನ ನಾಲ್ಕು ಮಂದಿ ಸ್ನೇಹಿತರೊಂದಿಗೆ ಸೇರಿ ಆಕೆಯ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ಆತನ ಸಹೋದರಿ ಸಿಯಾಲಿ ಎಲೆಗಳನ್ನು ಸಂಗ್ರಹಿಸಲು ಸಮೀಪದ ಕಾಡಿಗೆ ತೆರಳಿದ್ದಳು. ಅವಳ ಅಣ್ಣನೂ ತನ್ನ ಹಸುಗಳೊಂದಿಗೆ ತೆರಳಿದ್ದ. ಈ ವೇಳೆ ಆತ ತನ್ನ ನಾಲ್ವರು ಸ್ನೇಹಿತರನ್ನು ಕಾಡಿಗೆ ಕರೆಸಿಕೊಂಡು, ಕುಡಿದು ಕುಡಿತದ ಅಮಲಿನಲ್ಲಿ ಆಕೆಯ ಮೇಲೆರಗಿದ್ದಾರೆ. ಸರದಿಯಂತೆ ಆಕೆಯ ಮೇಲೆ ನಾಲ್ಕೂ ಜನ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯ ಕತ್ತು ಹಿಸುಕಿ ನಂತರ ಕೊಡಲಿಯಿಂದ ಹೊಡೆದು ಕೊಂದು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಬಳಿಕ ನಾಪತ್ತೆ ಪ್ರಕರಣ ದಾಖಲಿಸಿದ ಪಾಪಿ ಸಹೋದರ
ಇನ್ನು ಹತ್ಯೆ ಬಳಿಕ ತನ್ನ ಮೇಲೆ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ನವೆಂಬರ್ 6 ರಂದು ಸಹೋದರಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಚಾಕಪಾಡ್ ಪೊಲೀಸ್ ಠಾಣೆ ಪೊಲೀಸರು ಸುತ್ತಮುತ್ತಲ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದು ಈವೇಳೆ ನವೆಂಬರ್ 7 ರಂದು ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆದ ಪೊಲೀಸರು ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಮಹಿಳೆ ಸಾವಿಗೂ ಮುನ್ನ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ವಿಚಾರ ಬಹಿರಂಗವಾಗಿದೆ. ಅನುಮಾನದ ಮೇಲೆ ಆಕೆಯ ಸಹೋದರನನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬಯಲಾಗಿದೆ ಎಂದು ಚಾಕಪಾಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಲಿತ್ ಮೋಹನ್ ಸಾಗರ್ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com