ಮಿಜೋರಾಂ ಚುನಾವಣೆ ಫಲಿತಾಂಶ 2023: ಸ್ವಕ್ಷೇತ್ರದಲ್ಲೇ ಸಿಎಂ, ಡಿಸಿಎಂಗೆ ಸೋಲು, ZPM ಅಧಿಕಾರಕ್ಕೇರುವುದು ಬಹುತೇಕ ಖಚಿತ

ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಂಎನ್‌ಎಫ್‌ ಸೋಲು ಬಹುತೇಕ ಖಚಿತಗೊಂಡಿದ್ದು, ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಪಕ್ಷ ಅಧಿಕಾರ ಪಡೆಯುವುದು ಬಹುತೇಕ ಖಚಿತವಾಗಿದೆ.
ಮಿಜೋರಾಂ ಹಾಲಿ ಮುಖ್ಯಮಂತ್ರಿ ಝೋರಂತಂಗಾ.
ಮಿಜೋರಾಂ ಹಾಲಿ ಮುಖ್ಯಮಂತ್ರಿ ಝೋರಂತಂಗಾ.

ನವದೆಹಲಿ: ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಂಎನ್‌ಎಫ್‌ ಸೋಲು ಬಹುತೇಕ ಖಚಿತಗೊಂಡಿದ್ದು, ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಪಕ್ಷ ಅಧಿಕಾರ ಪಡೆಯುವುದು ಬಹುತೇಕ ಖಚಿತವಾಗಿದೆ.

ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಎನ್‌ಡಿಎ ಮೈತ್ರಿಕೂಟದಲ್ಲಿದ್ರೂ, ಅದು ಕೇಂದ್ರದಲ್ಲಿ ಮಾತ್ರ. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರಕ್ಕೆ ಬಂದರೆ ಅವರ ಜೊತೆ ವೇದಿಕೆ ಹಂಚಿಕೊಳ್ಳಲ್ಲ ಎಂದು ಮಿಜೋರಾಂ ಸಿಎಂ ಹಾಗೂ ಎಂಎನ್‌ಎಫ್‌ ಮುಖ್ಯಸ್ಥ ಝೋರಂತಂಗ ಹೇಳಿದ್ದರು. ಆದರೆ, ಝೋರಂತಂಗ ಅವರು ತಮ್ಮ ಕ್ಷೇತ್ರದಲ್ಲೇ ಸೋಲನ್ನು ಕಂಡಿದ್ದಾರೆ.

ಹಾಲಿ ಮುಖ್ಯಮಂತ್ರಿ ಝೋರಂತಂಗಾ ಐಜ್ವಾಲ್ ಪೂರ್ವ-1 ಕ್ಷೇತ್ರದಲ್ಲಿ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ನಾಯಕ ಲಾಲ್ತನ್ಸಂಗ ವಿರುದ್ಧ 2,101 ಮತಗಳಿಂದ ಸೋಲು ಕಂಡಿದ್ದಾರೆ.

ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಮೂರು ಸುತ್ತಿನ ಮತ ಎಣಿಕೆಯ ನಂತರ, ಮುಖ್ಯಮಂತ್ರಿ ಸೋತಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಮಾತ್ರವಲ್ಲದೆ, ಮಿಜೋರಾಂ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಆಡಳಿತಾರೂಢ ಎಂಎನ್‌ಎಫ್ ಸಹ ಅಧಿಕಾರ ಕಳೆದುಕೊಂಡಿದೆ.

ಸದ್ಯಕ್ಕೆ ವಿರೋಧ ಪಕ್ಷವಾದ ZPM 26 ಸ್ಥಾನಗಳಲ್ಲಿ ಗೆಲುವು ಸಾಧಿಸಿ 2ರಲ್ಲಿ ಮುನ್ನಡೆಯಲ್ಲಿದೆ. ಇನ್ನೊಂದೆಡೆ, ಎಂಎನ್‌ಎಫ್‌ 7 ರಲ್ಲಿ ಗೆದ್ದು 3ರಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಬಿಜೆಪಿ 2 ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ಮತ್ತೊಂದು ಆಘಾತಕಾರಿ ಫಲಿತಾಂಶದಲ್ಲಿ ಮಿಜೋರಾಂ ಉಪಮುಖ್ಯಮಂತ್ರಿ ತೌನ್ಲುಯಾ ಕೂಡ ಟುಯಿಚಾಂಗ್‌ನಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಎಂಎನ್‌ಎಫ್ ನಾಯಕರನ್ನು ZPM ಅಭ್ಯರ್ಥಿ ಡಬ್ಲ್ಯೂ ಚುನಾವ್ಮಾ ಅವರು 909 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಈ ಮಧ್ಯೆ, ZPM ಮುಖ್ಯಸ್ಥ ಮತ್ತು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ಸರ್ಚಿಪ್‌ನಿಂದ ಗೆಲುವು ಸಾಧಿಸಿದ್ದಾರೆ. ಎಂಎನ್ಎಫ್ ನ ಜೆ ಮಲ್ಸಾಮ್‌ಜುವಾಲಾ ವಂಚವಾಂಗ್ ಅವರನ್ನು 2,982 ಮತಗಳಿಂದ ಸೋಲಿಸಿದ್ದಾರೆ.

ಸೋಲು ಬೆನ್ನಲ್ಲೇ ಮಿಜೋರಾಂ ಹಾಲಿ ಸಿಎಂ ಝೋರಂತಂಗಾ ಅವರು ಇಂದು ಸಂಜೆ 4 ಗಂಟೆಗೆ ರಾಜ್ಯಪಾಲ ಹರಿ ಬಾಬು ಕಂಬಂಪತಿ ಅವರನ್ನು ಭೇಟಿ ಮಾಡಲಿದ್ದು, ರಾಜೀನಾಮೆ ನೀಡಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ಈಗಾಗಲೇ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಪಕ್ಷ 26 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ZPM ಅಧಿಕಾರಕ್ಕೇರುವುದು ಖಚಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com