ಗೋಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆಲ್ಲುತ್ತೆ: ಸಂಸತ್ ಕಲಾಪದಲ್ಲಿ DMK ಸಂಸದನ ಹೇಳಿಕೆ

ಸನಾತನ ಧರ್ಮದ ಕುರಿತ ಹೇಳಿಕೆ ವಿವಾದ ಹಸಿರಾಗಿರುವಂತೆಯೇ ಮತ್ತೋರ್ವ ಡಿಎಂಕೆ ನಾಯಕ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.
ಡಿಎಂಕೆ ಸಂಸದ ಸೆಂಥಿಲ್ ಕುಮಾರ್
ಡಿಎಂಕೆ ಸಂಸದ ಸೆಂಥಿಲ್ ಕುಮಾರ್
Updated on

ನವದೆಹಲಿ: ಸನಾತನ ಧರ್ಮದ ಕುರಿತ ಹೇಳಿಕೆ ವಿವಾದ ಹಸಿರಾಗಿರುವಂತೆಯೇ ಮತ್ತೋರ್ವ ಡಿಎಂಕೆ ನಾಯಕ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ತಮಿಳುನಾಡು ಸಚಿವ (Tamil Nadu Minister) ಉದಯನಿಧಿ ಸ್ಟಾಲಿನ್ (Udayanidhi Stalin) ಸನಾತನ ಧರ್ಮ (Sanatana Dharma) ವಿರೋಧಿ ಹೇಳಿಕೆ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಅದೇ ಪಕ್ಷದ ಮತ್ತೋರ್ವ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪ್ರಸ್ತಾಪಿಸಿ ಲೋಕಸಭೆಯಲ್ಲಿ ಮಾತನಾಡಿದ ಸೆಂಥಿಲ್ ಕುಮಾರ್, 'ಗೋಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

ಡಿಎಂಕೆ ಸಂಸದ (DMK MP) ಡಾ. ಡಿಎನ್‌ವಿ ಸೆಂಥಿಲ್ ಕುಮಾರ್ (Dr. DNV Senthil Kumar) ಎಂಬುವರು ಬಿಜೆಪಿ (BJP) ವಿರೋಧಿಸುವ ಭರದಲ್ಲಿ “ಗೋಮೂತ್ರ ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ” ಎಂದು ಹೇಳಿದ್ದಾರೆ. ಲೋಕಸಭಾ ಅಧಿವೇಶನದಲ್ಲಿ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2023 ಕುರಿತು ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಮಾತನಾಡಿದರು. ಈ ವೇಳೆ ಹಿಂದಿ ಹೃದಯಭಾಗದಲ್ಲಿರುವ ರಾಜ್ಯಗಳನ್ನು ಗೋಮೂತ್ರ ರಾಜ್ಯಗಳು ಎಂದು ಕರೆದಿದ್ದಾರೆ.

'ಈ ಬಿಜೆಪಿಯ ಶಕ್ತಿಯು ಮುಖ್ಯವಾಗಿ ನಾವು ಸಾಮಾನ್ಯವಾಗಿ ಗೋಮೂತ್ರ ರಾಜ್ಯಗಳು ಎಂದು ಕರೆಯುವ ಹಿಂದಿಯ ಹೃದಯಭಾಗದ ರಾಜ್ಯಗಳಲ್ಲಿ ಚುನಾವಣೆಗಳನ್ನು ಗೆಲ್ಲುವುದು ಮಾತ್ರ ಎಂದು ಈ ದೇಶದ ಜನರು ಭಾವಿಸಬೇಕು. ಗೆಲ್ಲಲಾಗದ ದಕ್ಷಿಣದ ರಾಜ್ಯಗಳನ್ನು ಕೇಂದ್ರ ಸರ್ಕಾರವು ಕೇಂದ್ರಾಡಳಿತ ಪ್ರದೇಶ ಮಾಡಬಹುದು. ಈ ರಾಜ್ಯಗಳ ಮೇಲೆ ಪರೋಕ್ಷ ಆಡಳಿತ ಹೊಂದಲು ಬಿಜೆಪಿಯು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕವನ್ನು ಕೇಂದ್ರಾಡಳಿತ ಪ್ರದೇಶ ಅಂತ ಘೋಷಿಸಬಹುದು ಎಂದು ಹೇಳಿದರು.

ಈ ಹಿಂದೆಯೂ ವಿವಾದ ಮೈಮೇಲೆ ಎಳೆದುಕೊಂಡಿದ್ದ ಸೆಂಥಿಲ್
ಸೆಂಥಿಲ್ ಕುಮಾರ್ ಈ ಹಿಂದೆಯೂ ಗೋಮೂತ್ರದ ಬಗ್ಗೆ ಹೇಳಿಕೆ ನೀಡಿದ್ದರು. ತಮಿಳುನಾಡಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವ ವೇಳೆ ಮಾತನಾಡಿದ್ದ ಸೆಂಥಿಲ್ ಕುಮಾರ್, ಎನ್ಇಪಿಯನ್ನು ಜಾರಿಗೆ ತರಬೇಕಾದರೆ ದೇಶದ ಅಭಿವೃದ್ಧಿಗೆ ದ್ರಾವಿಡ ಮಾದರಿಯನ್ನು ಜಾರಿಗೆ ತರಬೇಕು. ಅವರ ನೀತಿಯನ್ನು ನಮ್ಮ ಮೇಲೆ ಏಕೆ ಹೇರಲಾಗುತ್ತಿದೆ? ಬೇಕಿದ್ದರೆ ಅದನ್ನು ತಮ್ಮ ಗೋಮೂತ್ರ ರಾಜ್ಯಗಳಲ್ಲಿ ಅನುಷ್ಠಾನ ಮಾಡಿಕೊಳ್ಳಲಿ ಎಂದಿದ್ದರು. ಇದೀಗ ಸೆಂಥಿಲ್ ಗೋಮೂತ್ರ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com