ಬಿಜೆಪಿ ಸಂಸದೀಯ ಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿಗೆ ಸನ್ಮಾನ
ಬಿಜೆಪಿ ಸಂಸದೀಯ ಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿಗೆ ಸನ್ಮಾನ

'ನನ್ನನ್ನು ಮೋದಿ ಜಿ ಎಂದು ಕರೆಯಬೇಡಿ, ನಾನು ಕೇವಲ ಮೋದಿ ಅಷ್ಟೆ': ದೆಹಲಿಯಲ್ಲಿ ಬಿಜೆಪಿ ಸಂಸದೀಯ ಪಕ್ಷ ಸಭೆ

'ನನ್ನನ್ನು ಮೋದಿ ಜಿ ಎಂದು ಕರೆಯಬೇಡಿ, ನಾನು ಮೋದಿ ಅಷ್ಟೆ' ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಪಕ್ಷದ ಸದಸ್ಯರಿಗೆ ಹೇಳಿದ ಮಾತು.

ನವದೆಹಲಿ: 'ನನ್ನನ್ನು ಮೋದಿ ಜಿ ಎಂದು ಕರೆಯಬೇಡಿ, ನಾನು ಮೋದಿ ಅಷ್ಟೆ' ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಪಕ್ಷದ ಸದಸ್ಯರಿಗೆ ಹೇಳಿದ ಮಾತು.

ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಪ್ರಮುಖ ಮೂರು ರಾಜ್ಯಗಳನ್ನು ಗೆದ್ದು ಬೀಗುತ್ತಿರುವ ಬಿಜೆಪಿಯ ಸಂಸದೀಯ ಪಕ್ಷ ಸಭೆ ಇಂದು ದೆಹಲಿಯಲ್ಲಿ ನಡೆಯಿತು. ಸಭೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಸದಸ್ಯರು ಎದ್ದುನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿ ಅವರ ನಾಯಕತ್ವಕ್ಕೆ ಬಹುಪರಾಕ್ ಹೇಳಿದರು. ಹಿರಿಯ ನಾಯಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಪ್ರಧಾನಿ ಮೋದಿಯವರನ್ನು ಸನ್ಮಾನಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಮೂರು ರಾಜ್ಯಗಳ ಗೆಲುವು ಯಾರ ವೈಯಕ್ತಿಕ ಗೆಲುವು ಅಲ್ಲ, ಇದು ಪಕ್ಷದ ಸಾಮೂಹಿಕ ಗೆಲುವು. ಸರ್ಕಾರ ನಡೆಸಲು ಬಿಜೆಪಿ ಯೋಗ್ಯ ಪಕ್ಷ ಎಂದು ಜನ ಆರಿಸಿದ್ದಾರೆ. ಜನರ ಆಶೋತ್ತರಗಳಿಗೆ ತಕ್ಕಂತೆ ಆಡಳಿತ ನಡೆಸಬೇಕಾದದ್ದು ನಮ್ಮ ಕೆಲಸ. ಮೋದಿ ಜಿ, ಮೋದಿ ಜಿ ಎಂದು ಕರೆದು ನನ್ನನ್ನು ಸಾರ್ವಜನಿಕರಿಂದ ಅಂತರದಲ್ಲಿರುವಂತೆ ಮಾಡಬೇಡಿ, ನಾನು ಮೋದಿ ಅಷ್ಟೆ ಎಂದರು.

ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸ್ ಗಢ ರಾಜ್ಯಗಳ ಗೆಲುವಿಗೆ ಪ್ರಧಾನಿ ಮೋದಿಯವರ ನಾಯಕತ್ವವೇ ಪ್ರಮುಖ ಕಾರಣ ಎಂದು ಬಿಜೆಪಿ ಸದಸ್ಯರು ಸಾಮೂಹಿಕವಾಗಿಯೇ ಹೇಳುತ್ತಿದ್ದಾರೆ. ಈ ಬಗ್ಗೆ ಇಂದು ಮಾತನಾಡಿದ ಮೋದಿಯವರು, ಬಿಜೆಪಿ ಕಾರ್ಯಕರ್ತರ ಕಠಿಣ ಪರಿಶ್ರಮದಿಂದ ನಾವಿಂದು ಮೂರು ರಾಜ್ಯಗಳ ಚುನಾವಣೆಯಲ್ಲಿ ಗೆದ್ದಿದ್ದೇವೆ. ಇಲ್ಲಿ ಪ್ರತಿಯೊಬ್ಬರ ಕೆಲಸ, ಶ್ರಮ ಮುಖ್ಯವಾಗಿರುತ್ತದೆ. ಡಿಸೆಂಬರ್ 22ರಿಂದ ಜನವರಿ 25ರವರೆಗೆ ನಡೆಯುವ ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ಸಂಸದರು ಮತ್ತು ಸಚಿವರು ಭಾಗಿಯಾಗಬೇಕೆಂದು ಹೇಳಿದರು.

ಈ ವೇಳೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ, ಪ್ರಧಾನಿ ಮೋದಿಯವರು ಒಂದು ಆಸಕ್ತಿಕರ ವಿಷಯವನ್ನು ಇಂದು ಹಂಚಿಕೊಂಡಿದ್ದಾರೆ. ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವಾಗ 40 ಬಾರಿ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಪಕ್ಷ ಕೇವಲ 7 ಬಾರಿ ಗೆಲುವು ಕಂಡಿತ್ತು. ಆದರೆ ಬಿಜೆಪಿ 39 ಬಾರಿ ಚುನಾವಣೆಯಲ್ಲಿ 22 ಸಲ ಗೆಲುವು ಕಂಡಿದೆ ಎಂದು ಹೇಳಿದ್ದಾರೆ, ಇದು ನಿಜವಾಗಿಯೂ ಪಕ್ಷದ ಗೆಲುವು ಎಂದರು.

ಬಿಜೆಪಿ ಸಂಸದೀಯ ಪಕ್ಷ ಎಲ್ಲಾ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರನ್ನು ಒಳಗೊಂಡಿದ್ದು, ಸಂಸತ್ತು ಅಧಿವೇಶನ ಸಮಯದಲ್ಲಿ ಸಾಮಾನ್ಯವಾಗಿ ಪ್ರತಿವಾರ ಸಭೆ ಸೇರುತ್ತದೆ. ಸಭೆಯಲ್ಲಿ ಅದರ ನಾಯಕರು ಸಂಸತ್ತಿನ ಅಜೆಂಡಾ ಸೇರಿದಂತೆ ಪಕ್ಷದ ಸಂಘಟನಾತ್ಮಕ ಮತ್ತು ರಾಜಕೀಯ ಪ್ರಚಾರ ಹೀಗೆ ವಿವಿಧ ವಿಷಯಗಳ ಕುರಿತು ಚರ್ಚಿಸುತ್ತಾರೆ.

Related Stories

No stories found.

Advertisement

X
Kannada Prabha
www.kannadaprabha.com