ನವದೆಹಲಿ: ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ "ಎರಡು ಮುಖ್ಯ ಪ್ರಮಾದಗಳು" - ಇಡೀ ಕಾಶ್ಮೀರ ಜನರು ಕಷ್ಟವನ್ನು ಅನುಭವಿಸುವಂತೆ ಮಾಡಿತು. ಇಡೀ ಕಾಶ್ಮೀರವನ್ನು ಗೆಲ್ಲದೆ ಕದನ ವಿರಾಮ ಘೋಷಿಸಿದ್ದು ಮತ್ತು ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯದ್ದು ಆ ಎರಡು ಪ್ರಮಾದಗಳು ಎಂದು ಗೃಹ ಸಚಿವ ಅಮಿತ್ ಶಾ ನಿನ್ನೆ ಲೋಕಸಭೆಯಲ್ಲಿ ಹೇಳಿದ್ದರು.
ಇದು ವಿರೋಧ ಪಕ್ಷದವರನ್ನು ಕೆರಳಿಸಿತು. ಇದಕ್ಕೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಜವಾಹರಲಾಲ್ ನೆಹರು ಅವರನ್ನು ಸಮರ್ಥಿಸಿಕೊಂಡಿದ್ದಾರೆ, ದೆಹಲಿಯಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ವಿಶ್ವಸಂಸ್ಥೆಗೆ ಹೋಗಬೇಕೆಂದು ಸಲಹೆ ನೀಡಿದ್ದರು ಎಂದರು.
ನೆಹರೂರವರಿಗೆ ವಿಶ್ವಸಂಸ್ಥೆಗೆ ಹೋಗದೆ ಬೇರೆ ದಾರಿ ಇರಲಿಲ್ಲ; ಲಾರ್ಡ್ ಮೌಂಟ್ ಬ್ಯಾಟನ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಕೂಡ ಇದನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಪ್ರದೇಶಗಳನ್ನು ಉಳಿಸಲು ಸೇನೆಯನ್ನು ಬೇರೆಡೆಗೆ ತಿರುಗಿಸದಿದ್ದರೆ ಪೂಂಚ್ ಮತ್ತು ರಜೌರಿ ಜಿಲ್ಲೆಗಳು ಕೂಡ ಪಾಕಿಸ್ತಾನಕ್ಕೆ ಹೋಗುತ್ತಿತ್ತು. ಆ ಸಮಯದಲ್ಲಿ, ಪೂಂಚ್ ಮತ್ತು ರಜೌರಿಯನ್ನು ಉಳಿಸಲು ಸೈನ್ಯವನ್ನು ತಿರುಗಿಸಲಾಯಿತು ಎಂದರು.
ಲೋಕಸಭೆಯಲ್ಲಿ ನಿನ್ನೆ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ, ನೆಹರು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ, ದೊಡ್ಡ ಪ್ರದೇಶವನ್ನು ಬಿಟ್ಟುಕೊಡುತ್ತಿರಲಿಲ್ಲ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿಯೇ ಉಳಿಯುತ್ತಿತ್ತು ಎಂದಿದ್ದಾರೆ.
Advertisement