ಲೋಕಸಭೆಯಲ್ಲಿ ಸಂಸದೆ ಮಹುವಾ ಮೋಯಿತ್ರಾ ಕುರಿತ ನೈತಿಕ ಸಮಿತಿ ವರದಿ ಮಂಡನೆ, ಪ್ರತಿಪಕ್ಷಗಳಿಂದ ತೀವ್ರ ಗದ್ದಲ

ತೃಣಮೂಲ ಕಾಂಗ್ರೆಸ್‌ ಸಂಸದೆ (TMC MP) ಮಹುವಾ ಮೊಯಿತ್ರಾ (Mahua Moitra) ವಿರುದ್ಧದ 'ಪ್ರಶ್ನೆಗಾಗಿ ಲಂಚ' ಪಡೆದ ಪ್ರಕರಣದ ಕುರಿತು ಸದನ ನೈತಿಕ ಸಮಿತಿಯು ತಯಾರಿಸಿರುವ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ
ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ

ನವದೆಹಲಿ: ತೃಣಮೂಲ ಕಾಂಗ್ರೆಸ್‌ ಸಂಸದೆ (TMC MP) ಮಹುವಾ ಮೊಯಿತ್ರಾ (Mahua Moitra) ವಿರುದ್ಧದ 'ಪ್ರಶ್ನೆಗಾಗಿ ಲಂಚ' ಪಡೆದ ಪ್ರಕರಣದ ಕುರಿತು ಸದನ ನೈತಿಕ ಸಮಿತಿಯು ತಯಾರಿಸಿರುವ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.

ಮೂಲಗಳ ಪ್ರಕಾರ ಸಂಸದೆ ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ವರದಿ ಶಿಫಾರಸು ಮಾಡಿದ್ದು, ಇದೇ ವರದಿಯನ್ನು ಇದೀಗ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಪ್ರಶ್ನೋತ್ತರ ಅವಧಿಯಲ್ಲಿ ಮುಂದೂಡಲ್ಪಟ್ಟ ನಂತರ ಮಧ್ಯಾಹ್ನ ಸದನ ಮತ್ತೆ ಸೇರಿದಾಗ ನೈತಿಕ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್ ಅವರು ಸಮಿತಿಯ ಮೊದಲ ವರದಿಯನ್ನು ಮಂಡಿಸಿದರು. ಹೀಗಾಗಿ ವಿಪಕ್ಷಗಳು ಈ ಬಗ್ಗೆ ಸದನದಲ್ಲಿ ಕೋಲಾಹಲ ಎಬ್ಬಿಸಿವೆ.

ತೃಣಮೂಲ ಕಾಂಗ್ರೆಸ್ ಸದಸ್ಯರು ಮತ್ತು ಕಾಂಗ್ರೆಸ್ ನ ಕೆಲವರು ವರದಿಯ ಪ್ರತಿಯನ್ನು ನೀಡುವಂತೆ ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದರು. ತೃಣಮೂಲ ಕಾಂಗ್ರೆಸ್ ಸದಸ್ಯ ಕಲ್ಯಾಣ್ ಬ್ಯಾನರ್ಜಿ ವರದಿಯ ಶಿಫಾರಸುಗಳನ್ನು ಮತಕ್ಕೆ ಹಾಕುವ ಮೊದಲು ಅದರ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು. ಅಲ್ಲದೆ ಒಂದು ವೇಳೆ ಚರ್ಚೆ ಇಲ್ಲದೇ ಮತಕ್ಕೆ ಹಾಕಿದರೆ ಇದು ಮೊಯಿತ್ರಾ ಅವರನ್ನು ಸದನದಿಂದ ಹೊರಹಾಕಲು ಕಾರಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೈತಿಕ ಸಮಿತಿಯ ಈ ವರದಿಯು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ನಡೆಯುತ್ತಿರುವ ತಿಕ್ಕಾಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದು, ವರದಿಯ ಮಂಡನೆ ನಂತರ ಲೋಕಸಭೆ ಕಲಾಪದಲ್ಲಿ ಭಾರಿ ಗದ್ದಲ ಉಂಟಾಯಿತು. ವಿರೋಧ ಪಕ್ಷದ ಸಂಸದರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದರು ಸದನದ ಬಾವಿಗೆ ಇಳಿದು ಗದ್ದಲ ಎಬ್ಬಿಸಿದರು. ಹೀಗಾಗಿ ಅನ್ಯ ಮಾರ್ಗಲ್ಲಿದೇ ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಮಹುವಾ ಮೊಯಿತ್ರಾ ಅವರ ನಡೆ “ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್” ಎಂದು ಸಮಿತಿಯ ವರದಿ ಘೋಷಿಸಿದೆ. ವರದಿಯ ಪರವಾಗಿ ಸದನವು ಮತ ​​ಚಲಾಯಿಸಿದರೆ ಮೋಯಿತ್ರಾ ಅವರನ್ನು ಸಂಸತ್‌ ಸದಸ್ಯತ್ವದಿಂದ ಉಚ್ಚಾಟಿಸಬಹುದಾಗಿದೆ.

ಏನಿದು ಪ್ರಕರಣ?
ಅದಾನಿ ಗ್ರೂಪ್ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲು ಮೊಯಿತ್ರಾ ಅವರಿಗೆ ಹಣ ನೀಡಿದ್ದಾರೆ ಎಂದು ಉದ್ಯಮಿ ದರ್ಶನ್ ಹಿರಾನಂದಾನಿ ಆರೋಪಿಸಿದ್ದರು.  ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಣಕಲು ಮತ್ತು ಅವರನ್ನು ಮುಜುಗರಕ್ಕೀಡು ಮಾಡಲು ಕೈಗಾರಿಕೋದ್ಯಮಿ ಗೌತಮ್ ಅದಾನಿಯನ್ನು ಮೊಯಿತ್ರಾ ಗುರಿಯಾಗಿಸಿದ್ದಾರೆ ಎಂದು ಸಹಿ ಮಾಡಿದ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದರು. ನವೆಂಬರ್ 9 ರಂದು ನಡೆದ ಸಭೆಯಲ್ಲಿ, "ಪ್ರಶ್ನೆಗಾಗಿ ನಗದ" ಆರೋಪದ ಮೇಲೆ ಲೋಕಸಭೆಯಿಂದ ಮೊಯಿತ್ರಾ ಅವರನ್ನು ಉಚ್ಚಾಟಿಸಲು ಸಮಿತಿಯು ತನ್ನ ವರದಿಯನ್ನು ಶಿಫಾರಸು ಮಾಡಿತು. ಅಮಾನತುಗೊಂಡಿರುವ ಕಾಂಗ್ರೆಸ್ ಸದಸ್ಯೆ ಪ್ರಣೀತ್ ಕೌರ್ ಸೇರಿದಂತೆ ಸಮಿತಿಯ ಆರು ಸದಸ್ಯರು ವರದಿಯ ಪರವಾಗಿ ಮತ ಹಾಕಿದರು. ವಿರೋಧ ಪಕ್ಷಗಳ ಸಮಿತಿಯ ನಾಲ್ವರು ಸದಸ್ಯರು ಇದಕ್ಕೆ ತದ್ವಿರುದ್ಧ ಅಭಿಪ್ರಾಯಗಳನ್ನು ಸಲ್ಲಿಸಿದ್ದರು.

ಇದೀಗ ಈ ವರದಿ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಸಮಿತಿಯ ಶಿಫಾರಸಿನ ಪರವಾಗಿ ಸದನವು ಮತ ಚಲಾಯಿಸಿದರೆ ಮಾತ್ರ ಮೊಯಿತ್ರಾ ಅವರನ್ನು ಉಚ್ಚಾಟಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com