ವಿಶ್ವದ ಅತಿದೊಡ್ಡ ಕಾರ್ಪೊರೇಟ್​​ ಕಚೇರಿ ಸೂರತ್ ಡೈಮಂಡ್ ಬೋರ್ಸ್ ಉದ್ಘಾಟಿಸಿದ ಪ್ರಧಾನಿ ಮೋದಿ

ವಿಶ್ವದ ಅತಿದೊಡ್ಡ ಕಚೇರಿ ವಾಣಿಜ್ಯ ಕಟ್ಟಡವಾದ ಸೂರತ್ ಡೈಮಂಡ್ ಬೋರ್ಸ್ (Surat Diamond Bourse) ಅನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾನುವಾರ (ಡಿಸೆಂಬರ್​ 17) ಗುಜರಾತ್​ನಲ್ಲಿ ಉದ್ಘಾಟಿಸಿದರು.
ಸೂರತ್ ಡೈಮಂಡ್ ಬೋರ್ಸ್ ಉದ್ಘಾಟಿಸಿದ ಪ್ರಧಾನಿ ಮೋದಿ
ಸೂರತ್ ಡೈಮಂಡ್ ಬೋರ್ಸ್ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ವಿಶ್ವದ ಅತಿದೊಡ್ಡ ಕಚೇರಿ ವಾಣಿಜ್ಯ ಕಟ್ಟಡವಾದ ಸೂರತ್ ಡೈಮಂಡ್ ಬೋರ್ಸ್ (Surat Diamond Bourse) ಅನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾನುವಾರ (ಡಿಸೆಂಬರ್​ 17) ಗುಜರಾತ್​ನಲ್ಲಿ ಉದ್ಘಾಟಿಸಿದರು.

ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರ ಎಂದು ದಾಖಲೆ ಮಾಡಿರುವ 'ಸೂರತ್ ಡೈಮಂಡ್ ಬೋರ್ಸ್​' ಅನ್ನು ಉದ್ಘಾಟಿಸಿದ್ದಾರೆ. ಸೂರತ್‌ನ ಖಾಜೋದ್ ಪ್ರದೇಶದಲ್ಲಿ ನಿರ್ಮಿಸಲಾದ 'ಸೂರತ್ ಡೈಮಂಡ್ ಬೋರ್ಸ್' ರಾಜ್ಯ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ಮೈಲಿಗಲ್ಲು ಆಗಲಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಭೂಪೇಂದ್ರ ಪಟೇಲ್ ಕೇಂದ್ರ ಮತ್ತು ರಾಜ್ಯ ಸಚಿವರು, ಡೈಮಂಡ್ ಬೋರ್ಸ್ ಅಧ್ಯಕ್ಷರು ಮತ್ತು ಬೋರ್ಸ್ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಸೂರತ್ ಡೈಮಂಡ್ ಬೋರ್ಸ್‌ನ ಮಹತ್ವವನ್ನು ಒಪ್ಪಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸುತ್ತಾ, "ಸೂರತ್ ಡೈಮಂಡ್ ಬೋರ್ಸ್ ಸೂರತ್‌ನ ವಜ್ರ ಉದ್ಯಮದ ಚೈತನ್ಯ ಮತ್ತು ಬೆಳವಣಿಗೆಯನ್ನು ತೋರಿಸುತ್ತದೆ. ಇದು ಭಾರತದ ವಾಣಿಜ್ಯೋದ್ಯಮ ಮನೋಭಾವಕ್ಕೆ ಸಾಕ್ಷಿಯಾಗಿದೆ." ಎಂದು ಹೇಳಿದ್ದಾರೆ.

ಈ ಆಫೀಸ್​ ರಾಜ್ಯ ಮತ್ತು ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ಮೈಲಿಗಲ್ಲು ಆಗಲಿದೆ. 1 ಲಕ್ಷಕ್ಕೂ ಅಧಿಕ ಉದ್ಯೋಗವಕಾಶಗಳು ಇರಲಿದೆ. ಸೂರತ್ ಡೈಮಂಡ್ ಬೋರ್ಸ್ ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯವಹಾರಕ್ಕೆ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಲಿದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಹೇಳಿಕೆಯಲ್ಲಿ ತಿಳಿಸಿದೆ. ಇದು ಒರಟು ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ಆಭರಣಗಳ ವ್ಯಾಪಾರಕ್ಕೆ ಜಾಗತಿಕ ಕೇಂದ್ರವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದು ಆಮದು ಮತ್ತು ರಫ್ತುಗಾಗಿ ಅತ್ಯಾಧುನಿಕ ‘ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್’, ಚಿಲ್ಲರೆ ಆಭರಣ ವ್ಯವಹಾರಕ್ಕಾಗಿ ಆಭರಣ ಮಾಲ್ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್ ಗಳ ಸೌಲಭ್ಯವನ್ನು ಒಳಗೊಂಡಿರುತ್ತದೆ.

ಸುಮಾರು 3,500 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಕಟ್ಟಡವು 67 ಲಕ್ಷ ಚದರ ಅಡಿ ನೆಲದ ಸ್ಥಳವನ್ನು ವ್ಯಾಪಿಸಿದೆ ಮತ್ತು ಸುಮಾರು 4,500 ವಜ್ರ ವ್ಯಾಪಾರ ಕಚೇರಿಗಳನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿದೆ. ಈ ವರ್ಷದ ಆಗಸ್ಟ್​ನಲ್ಲಿ ಡೈಮಂಡ್ ರಿಸರ್ಚ್ ಆ್ಯಂಡ್​ ಮರ್ಕಂಟೈಲ್ (ಡ್ರೀಮ್) ನಗರದ ಭಾಗವಾಗಿರುವ ಈ ಕಟ್ಟಡವನ್ನು ಗಿನ್ನೆಸ್ ವಿಶ್ವ ದಾಖಲೆಗಳು ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡವೆಂದು ಗುರುತಿಸಿವೆ.

ಒಂಬತ್ತು ಗೋಪುರಗಳು
35.54 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಈ ಬೃಹತ್ ರಚನೆಯು ಒಂಬತ್ತು ನೆಲ ಗೋಪುರಗಳು ಮತ್ತು 15 ಮಹಡಿಗಳನ್ನು ಹೊಂದಿದ್ದು, 300 ಚದರ ಅಡಿಯಿಂದ 1 ಲಕ್ಷ ಚದರ ಅಡಿವರೆಗಿನ ಕಚೇರಿ ಸ್ಥಳಗಳನ್ನು ಹೊಂದಿದೆ. ಒಂಬತ್ತು ಆಯತಾಕಾರದ ಗೋಪುರಗಳು ಕೇಂದ್ರ ಪಿಲ್ಲರ್​ನ ಸಂಪರ್ಕ ಹೊಂದಿವೆ. ಈ ಕಟ್ಟಡವು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ನಿಂದ ಪ್ಲಾಟಿನಂ ಶ್ರೇಯಾಂಕವನ್ನು ಹೊಂದಿದೆ. ವಿಶೇಷವೆಂದರೆ, ಕಿರಣ್ ಜೆಮ್ಸ್​ನ ನಿರ್ದೇಶಕ, ಬಿಲಿಯನೇರ್ ವಜ್ರದ ವ್ಯಾಪಾರಿ ವಲ್ಲಭಭಾಯಿ ಲಖಾನಿ ತಮ್ಮ 17,000 ಕೋಟಿ ರೂ.ಗಳ ವ್ಯವಹಾರವನ್ನು ಡೈಮಂಡ್ ಬೋರ್ಸ್​ಗೆ ಸ್ಥಳಾಂತರಿಸಿದ್ದಾರೆ ಮತ್ತು ತಮ್ಮ ಉದ್ಯೋಗಿಗಳಿಗೆ ವಸತಿ ಕಲ್ಪಿಸಲು ಮಿನಿ ಟೌನ್ಶಿಪ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದ್ದಾರೆ. 

ಇದು 67,000 ಜನರಿಗೆ, ಉದ್ಯಮಿಗಳು ಮತ್ತು ಸಂದರ್ಶಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಕಟ್ಟಡದ ಪ್ರವೇಶದ್ವಾರಗಳ ಬಳಿ ಹೆಚ್ಚಿನ ಭದ್ರತಾ ಚೆಕ್‌ಪೋಸ್ಟ್‌ಗಳು ಮತ್ತು ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಗಳಿವೆ. ಕಟ್ಟಡದ ನೆಲ ಮಹಡಿಯಲ್ಲಿ ಸದಸ್ಯರಿಗೆ ಬ್ಯಾಂಕ್, ರೆಸ್ಟೋರೆಂಟ್, ಡೈಮಂಡ್ ಲ್ಯಾಬ್ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ. ಪ್ರಪಂಚದಾದ್ಯಂತದ ಇನ್ಮುಂದೆ ವಜ್ರಗಳನ್ನು ಇಲ್ಲಿ ಪಾಲಿಶ್ ಮಾಡಲಾಗುತ್ತದೆ. ಒರಟು, ಕಟ್, ಪಾಲಿಶ್ ಮಾಡಿದ ವಜ್ರಗಳು, ವಜ್ರದ ಆಭರಣಗಳು, ವಜ್ರ-ಚಿನ್ನ-ಬೆಳ್ಳಿ-ಪ್ಲಾಟಿನಂ ಆಭರಣಗಳು ಸೇರಿದಂತೆ ಹೆಚ್ಚಿನ ಮೌಲ್ಯದ ಆಭರಣಗಳನ್ನು ಇಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.

'ಪೆಂಟಗನ್'​​ ದಾಖಲೆ ಮುರಿದ ಭಾರತ: 
ಸೂರತ್ ಡೈಮಂಡ್ ಬೋರ್ಸ್ ಕೇವಲ ಕಟ್ಟಡವಲ್ಲ ಇದೊಂದು ವಾಸ್ತುಶಿಲ್ಪದ ವಿಶೇಷತೆಯನ್ನೇ ಎತ್ತಿತೋಸಿಸುತ್ತದೆ. 4,500 ಕಚೇರಿಗಳನ್ನು ಇದು ಹೊಂದಿದೆ, ಇದು ಪ್ರಪಂಚದ ಅತಿದೊಡ್ಡ ಇಂಟರ್​ಕನೆಕ್ಟೆಡ್​ ಕಟ್ಟಡವಾಗಿದೆ. ಗಾತ್ರದಲ್ಲಿ ದಾಖಲೆ ಬರೆದಿದ್ದ ಪೆಂಟಗನ್ ಕಟ್ಟಡವನ್ನು ಮೀರಿಸಿ, ಈ ಬೃಹತ್ ಕಟ್ಟಡ ದೇಶದ ಅತಿದೊಡ್ಡ ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. 175 ದೇಶಗಳ 4,200 ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿರುವ ಸೂರತ್ ಡೈಮಂಡ್ ಬೋರ್ಸ್ ಜಾಗತಿಕ ವಜ್ರ ವ್ಯಾಪಾರ ಮಾಡೋರಿಗೆ ಅದ್ಭುತ ವೇದಿಕೆಯಾಗಿದೆ. ಈಉದ್ಯಮವು ಸುಮಾರು 1.5 ಲಕ್ಷ ಜನರಿಗೆ ಉದ್ಯೋಗವಕಾಶವನ್ನು ಸೃಷ್ಟಿಸುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com