ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ಡ್ರೋನ್ ದಾಳಿ: ಬೆಂಕಿ ಅವಘಡ, ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆ

ಅರಬ್ಬಿ ಸಮುದ್ರದಲ್ಲಿ ವ್ಯಾಪಾರಿ ಹಡಗೊಂದಕ್ಕೆ ಡ್ರೋನ್ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದ ಕಾರಣ ಹಡಗಿನಲ್ಲಿ ಬೆಂಕಿ ಅವಘಡಕ್ಕೆ ಕಾರಣವಾಗಿದ್ದು, ವಿಚಾರ ತಿಳಿದ ಕೂಡಲೇ ಭಾರತೀಯ ನೌಕಾಪಡೆಯ ನೌಕೆಯೊಂದು ನೆರವಿಗೆ ದೌಡಾಯಿಸಿದೆ.
ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ಡ್ರೋನ್ ದಾಳಿ
ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ಡ್ರೋನ್ ದಾಳಿ

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವ್ಯಾಪಾರಿ ಹಡಗೊಂದಕ್ಕೆ ಡ್ರೋನ್ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದ ಕಾರಣ ಹಡಗಿನಲ್ಲಿ ಬೆಂಕಿ ಅವಘಡಕ್ಕೆ ಕಾರಣವಾಗಿದ್ದು, ವಿಚಾರ ತಿಳಿದ ಕೂಡಲೇ ಭಾರತೀಯ ನೌಕಾಪಡೆಯ ನೌಕೆಯೊಂದು ನೆರವಿಗೆ ದೌಡಾಯಿಸಿದೆ.

ಶನಿವಾರ ಈ ಘಟನೆ ನಡೆದಿದ್ದು, ಯಾವುದೇ ಜೀವ ಹಾನಿ ವರದಿಯಾಗಿಲ್ಲ ಎಂದು ಸಮುದ್ರಯಾನ ಸಂಸ್ಥೆ ತಿಳಿಸಿದೆ. ಪ್ರಸ್ತುತ ಬೆಂಕಿಯನ್ನು ನಂದಿಸಲಾಗಿದೆ. ಆದರೆ ಅದು ಹಡಗಿನ ಕಾರ್ಯಾಚರಣೆಗೆ ತೊಡಕು ಉಂಟುಮಾಡಿದೆ. ಹಡಗಿನಲ್ಲಿರುವ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಲಿಬೇರಿಯಾ ಧ್ವಜವುಳ್ಳ ಟ್ಯಾಂಕರ್, ಇಸ್ರೇಲ್‌ಗೆ ಸಂಬಂಧಿಸಿದ್ದಾಗಿದೆ. ಈ ಹಡಗು ಸೌದಿಯಿಂದ ಮಂಗಳೂರಿಗೆ ಬರುತ್ತಿತ್ತು ಎಂದು ಮತ್ತೊಂದು ಸಮುದ್ರಯಾನ ಸಂಸ್ಥೆ ಹೇಳಿದೆ. ಭಾರತದ ಕರಾವಳಿ ಭಾಗವಾದ ಗುಜರಾತ್‌ನ ವೆರಾವಲ್ ಕರಾವಳಿಯಿಂದ ಸುಮಾರು 200 ಕಿ.ಮೀ ದೂರ ಅರಬ್ಬಿ ಸಮುದ್ರದಲ್ಲಿ ನಡೆದ ಈ ದಾಳಿಯಿಂದ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಗೆ ಯಾವುದೇ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ಲೈಬಿರಿಯಾ ಧ್ವಜ ಹೊತ್ತಿರುವ ಈ ರಾಸಾಯನಿಕ ಉತ್ಪನ್ನಗಳ ಟ್ಯಾಂಕರ್ ಇಸ್ರೇಲ್ ಜತೆ ನಂಟು ಹೊಂದಿದೆ ಎಂದು ಬ್ರಿಟಿಷ್ ಸೇನೆಯ ಯುನೈಟೆಡ್ ಕಿಂಗ್‌ಡಮ್ ಸಾಗರ ವ್ಯಾಪಾರ ಕಾರ್ಯಾಚರಣೆಗಳು ಮತ್ತು ಸಾಗರ ಭದ್ರತಾ ಸಂಸ್ಥೆ ಆಂಬ್ರೆ ಮಾಹಿತಿ ನೀಡಿದೆ.

ತನಿಖೆ ಆರಂಭ
ಸಿಬ್ಬಂದಿರಹಿತ ವೈಮಾನಿಕ ವ್ಯವಸ್ಥೆಯಿಂದ ದಾಳಿ ನಡೆಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಯುನೈಟೆಡ್‌ ಕಿಂಗ್‌ಡಮ್‌ ಮೆರಿಟೈಮ್ ಆಪರೇಷನ್ಸ್ ತಿಳಿಸಿದೆ. ಹಡಗಿನಲ್ಲಿರುವ ಸಿಬ್ಬಂದಿಯಲ್ಲಿ 20 ಭಾರತೀಯರು ಕೂಡ ಸೇರಿದ್ದಾರೆ. ಗುಜರಾತ್‌ನ ಪೋರಬಂದರ್ ಕರಾವಳಿಯಿಂದ ಸುಮಾರು 217 ನಾಟಿಕಲ್ ಮೈಲು ದೂರದಲ್ಲಿರುವ ಎಂವಿ ಚೆಮ್ ಪ್ಲುಟೊ ವ್ಯಾಪಾರಿ ಹಡಗಿನ ಕಡೆಗೆ ಭಾರತೀಯ ಕರಾವಳಿ ಕಾವಲು ಹಡಗು ತೆರಳುತ್ತಿದೆ.

ಸೌದಿಯಿಂದ ಮಂಗಳೂರಿನತ್ತ ಪಯಣ
ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರಿನ ಕಡೆಗೆ ತೆರಳುತ್ತಿದ್ದ ಹಡಗು, ಕಚ್ಚಾ ತೈಲವನ್ನು ರವಾನಿಸುತ್ತಿತ್ತು. ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಪಹರೆ ನಡೆಸುತ್ತಿದ್ದ ಕರಾವಳಿ ಕಾವಲು ಹಡಗು ಐಸಿಜಿಎಸ್ ವಿಕ್ರಮ್, ಆಪತ್ತಿನಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ದೌಡಾಯಿಸಿದೆ. ಅದಕ್ಕೆ ಸಹಾಯ ಒದಗಿಸುವಂತೆ ಈ ಭಾಗದಲ್ಲಿನ ಎಲ್ಲಾ ಹಡುಗಳಿಗೂ ಕರಾವಳಿ ಕಾವಲು ಪಡೆ ವಿಭಾಗ ಸೂಚನೆ ನೀಡಿದೆ. ICGS ವಿಕ್ರಮ್ ಅನ್ನು ಭಾರತೀಯ ವಿಶೇಷ ಆರ್ಥಿಕ ವಲಯದ ಗಸ್ತಿಗೆ ನಿಯೋಜಿಸಲಾಗಿತ್ತು. ಈಗ ಅದು ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ತನ್ನ ಪ್ರಯಾಣ ನಡೆಸಿದೆ. ಸುಮಾರು 20 ಭಾರತೀಯರನ್ನು ಒಳಗೊಂಡಂತೆ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಐಸಿಜಿಎಸ್ ವಿಕ್ರಮ್ ಪ್ರದೇಶದಲ್ಲಿರುವ ಎಲ್ಲಾ ಹಡಗುಗಳಿಗೆ ನೆರವು ನೀಡಲು  ಸೂಚನೆ ನೀಡಲಾಗಿದೆ' ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೇಲ್, ಪ್ಯಾಲೆಸ್ಟೀನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಂಪು ಸಮುದ್ರದಲ್ಲಿ ಇಸ್ರೇಲ್ ಹಡಗುಗಳ ಮೇಲೆ ಇರಾನ್ ಬೆಂಬಲಿತ ಹೌತಿ ಉಗ್ರರು ಇದೇ ರೀತಿಯ ದಾಳಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪೆಂಟಗನ್ ವರದಿ ಪ್ರಕಾರ, ಹೌತಿ ಬಂಡುಕೋರರು 100 ಕ್ಕೂ ಹೆಚ್ಚು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಮಾಡಿದ್ದಾರೆ. 35 ಕ್ಕೂ ಹೆಚ್ಚು ವಿವಿಧ ದೇಶಗಳನ್ನು ಒಳಗೊಂಡ 10 ಸರಕು ಸಾಗಣೆ ಹಡಗುಗಳನ್ನು ಗರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com