ಮದುವೆಯಾದ ಕೆಲವೇ ಗಂಟೆಗಳಲ್ಲಿ ಪತ್ನಿಯ ಮೇಲೆ ಹಲ್ಲೆ: ಪ್ರೇರಕ ಭಾಷಣಕಾರ ವಿವೇಕ್ ಬಿಂದ್ರಾ ವಿರುದ್ಧ ಕೇಸ್
ನವದೆಹಲಿ: ಜನಪ್ರಿಯ ಪ್ರೇರಕ ಭಾಷಣಕಾರ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಯಾಗಿರುವ ವಿವೇಕ್ ಬಿಂದ್ರಾ ವಿರುದ್ಧ ಅವರ ಪತ್ನಿಯೇ ಕೇಸ್ ದಾಖಲಿಸಿದ್ದಾರೆ.
ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರೇರಕ ಭಾಷಣಕಾರ ವಿವೇಕ್ ಬಿಂದ್ರಾ ವಿರುದ್ಧ ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಎಫ್‌ಐಆರ್ ದಾಖಲಿಸಿರುವುದಾಗಿ ವರದಿಯಾಗಿದೆ.
ಡಿಸೆಂಬರ್ 7 ರ ಮುಂಜಾನೆ ಬಿಂದ್ರಾ ಮತ್ತು ಅವರ ತಾಯಿ ಪ್ರಭಾ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ವೇಳೆ ಅವರಿಬ್ಬರ ನಡುವೆ ಯಾನಿಕಾ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ. ಈ ವೇಳೆ ಸಿಟ್ಟಿನಿಂದ ಬಿಂದ್ರಾ ಅವರು ಪತ್ನಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಪರಿಣಾಮ ಯಾನಿಕಾ ದೇಹಕ್ಕೆ ಗಾಯಗಳಾಗಿವೆ. ಇದರ ವೀಡಿಯೋ ಕೂಡ ಮಾಡಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಡಿಸೆಂಬರ್ 6ರಂದು ಬಿಂದ್ರಾ ಹಾಗೂ ಯಾನಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಮದುವೆಯಾದ ಕೆಲವೇ ಗಂಟೆಗಳಲ್ಲಿ ಯಾನಿಕಾಳನ್ನು ರೂಮಿನೊಳಗೆ ಕರೆದುಕೊಂಡು ಹೋಗಿದ್ದ ಬಿಂದ್ರಾ, ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಆಕೆಯ ಕೂದಲು ಎಳೆದುಕೊಂಡು ಮತ್ತು ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಫೋನ್ ಕೂಡ ಒಡೆದು ಹಾಕಿದ್ದಾರೆ. ಇನ್ನು ಹಲ್ಲೆಯಿಂದಾಗಿ ಯಾನಿಕಾಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿವೇಕ್ ಬಿಂದ್ರಾ ಡಿಸೆಂಬರ್ 6 ರಂದು ಯಾನಿಕಾಳನ್ನು ವಿವಾಹವಾದರು. ಆದರೆ ಎಂಟು ದಿನಗಳ ಬಳಿಕ ಡಿಸೆಂಬರ್ 14 ರಂದು, ಬಿಂದ್ರಾ ವಿರುದ್ಧ ನೋಯ್ಡಾ ಸೆಕ್ಟರ್ 126 ಪೊಲೀಸ್ ಠಾಣೆಯಲ್ಲಿ ತನ್ನ ಹೆಂಡತಿಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಬಡಾ ಬ್ಯುಸಿನೆಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಉತ್ತಮ ಪ್ರೇರಕ ಭಾಷಣಕಾರ ಬಿಂದ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 323, 504, 427 ಮತ್ತು 325 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ