ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ: ಕುತೂಹಲ ಕೆರಳಿಸಿದ ಪ್ರಶಾಂತ್ ಕಿಶೋರ್-ಚಂದ್ರಬಾಬು ನಾಯ್ಡು ಭೇಟಿ

ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ ಇತ್ತ ಖ್ಯಾತ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮತ್ತು ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಭೇಟಿಯಾಗಿದ್ದಾರೆ.
ಶಾಂತ್ ಕಿಶೋರ್-ಚಂದ್ರಬಾಬು
ಶಾಂತ್ ಕಿಶೋರ್-ಚಂದ್ರಬಾಬು

ವಿಜಯವಾಡ: ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ ಇತ್ತ ಖ್ಯಾತ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮತ್ತು ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಭೇಟಿಯಾಗಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ಶನಿವಾರ ಅಮರಾವತಿಯಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ್ದು, ಆಂಧ್ರ ಪ್ರದೇಶ ರಾಜಕೀಯ ವಲಯದಲ್ಲಿ ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಈ ಭೇಟಿಯ ಹಿನ್ನಲೆ ಏನು ಎಂಬುದು ಮಾತ್ರ ಈ ವರೆಗೂ ಬಹಿರಂಗವಾಗಿಲ್ಲ. 

ಮೂಲಗಳ ಪ್ರಕಾರ ಪ್ರಶಾಂತ್ ಕಿಶೋರ್ ಮತ್ತು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮತ್ತು ಇನ್ನೂ ಮೂವರು ಖಾಸಗಿ ಜೆಟ್‌ನಲ್ಲಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಜಯವಾಡ ಬಳಿಯ ಗನ್ನವರಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಬಳಿಕ ಲೋಕೇಶ್ ಮತ್ತು ಕಿಶೋರ್ ವಿಮಾನ ನಿಲ್ದಾಣದಿಂದ ಹೊರಗೆ ಬಂದು ಕಪ್ಪು ಬಣ್ಣದ ಎಸ್‌ಯುವಿ ಕಾರು ಹತ್ತಿ ಹೊರಟಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಕಿಶೋರ್ ಅವರು ಆಂಧ್ರ ಪ್ರದೇಶ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು ಎಂದು ಮೂಲವೊಂದು ತಿಳಿಸಿದೆ. 

ಆಡಳಿತ ಪಕ್ಷದ ನಾಯಕರ ವ್ಯಂಗ್ಯ
ಇನ್ನು ಪ್ರಶಾಂತ್ ಕಿಶೋರ್ ಮತ್ತು ಚಂದ್ರಬಾಬು ನಾಯ್ಡು ಭೇಟಿ ಕುರಿತು ವ್ಯಂಗ್ಯ ಮಾಡಿರುವ ಆಂಧ್ರಪ್ರದೇಶದ ನೀರಾವರಿ ಸಚಿವ ಎ ರಾಮಬಾಬು ನಾಯ್ಡು, '(ಕಟ್ಟಡ) ವಸ್ತುವೇ ದೋಷಪೂರಿತವಾದಾಗ ಮೇಸ್ತ್ರಿ ಏನು ಮಾಡಬಹುದು?' ಎಂದು ಟ್ವೀಟರ್ ನಲ್ಲಿ ಲೇವಡಿ ಮಾಡಿದ್ದಾರೆ. 

ಈ ಹಿಂದೆ ಜಗನ್ ಗಾಗಿ ಕೆಲಸ ಮಾಡಿದ್ದ ಪ್ರಶಾಂತ್ ಕಿಶೋರ್
ಇನ್ನು ಈ ಹಿಂದೆ ಅಂದರೆ 2019ರಲ್ಲಿ ಲೋಕಸಭಾ ಚುನಾವಣೆ ಬೆನ್ನಲ್ಲೇ ನಡೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಇದೇ ಪ್ರಶಾಂತ್ ಕಿಶೋರ್ ಹಾಲಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ್ದರು. ಅಂತಿಮವಾಗಿ ಆ ಚುನಾವಣೆಯಲ್ಲಿ ಜಗನ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿತ್ತು. ಅಂದು ಇದೇ ಟಿಡಿಪಿ ಪಕ್ಷದ ನಾಯಕರು ಪ್ರಶಾಂತ್ ಕಿಶೋರ್ ವಿರುದ್ಧ ಟೀಕಾ ಪ್ರಹಾರಗಳನ್ನೇ ಹರಿಸಿದ್ದರು. ಇದೀಗ ಮತ್ತೆ ಪ್ರಶಾಂತ್ ಕಿಶೋರ್ ಆಂಧ್ರ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಈ ಬಾರಿ ಯಾರ ಪರ ಕೆಲಸ ಮಾಡಲಿದ್ದಾರೆ ಎಂಬುದು ಕುತೂಹಲ ಕೆರಳಸಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com