ಸಂಸದರ ಅಮಾನತನ್ನು ಆಡಳಿತ ಪಕ್ಷ ಅಸ್ತ್ರವಾಗಿಸಿಕೊಂಡಿದೆ: ಸಭಾಪತಿಗೆ ಪತ್ರದ ಮೂಲಕ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ

ಆಡಳಿತಾರೂಢ ಪಕ್ಷ ಪ್ರಜಾಪ್ರಭುತ್ವವನ್ನು ನಾಶಪಡಿಸಲು, ಸಂಸತ್ತಿನ ನಿಯಮಗಳನ್ನು ಹಾಳುಮಾಡಲು ಸಂಸದರ ಅಮಾನತನ್ನು ಅಸ್ತ್ರವಾಗಿಸಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಆಡಳಿತಾರೂಢ ಪಕ್ಷ ಪ್ರಜಾಪ್ರಭುತ್ವವನ್ನು ನಾಶಪಡಿಸಲು, ಸಂಸತ್ತಿನ ನಿಯಮಗಳನ್ನು ಹಾಳುಮಾಡಲು ಸಂಸದರ ಅಮಾನತನ್ನು ಅಸ್ತ್ರವಾಗಿಸಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಹೇಳಿದ್ದಾರೆ.

ಸಂಸದರ ಅಮಾನತು ವಿಚಾರ ಕುರಿತು ಚರ್ಚೆ ನಡೆಸಲು ಖರ್ಗೆಯವರನ್ನು ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಆದರೆ, ಮಲ್ಲಿಕಾರ್ಜುನ ಖರ್ಗೆಯವರು ಅವರ ನಿವಾಸಕ್ಕೆ ಹೋಗಿಲ್ಲ. ಬದಲಿಗೆ ಪತ್ರ ಬರೆದು ಉತ್ತರಿಸಿದ್ದಾರೆ. ಅಲ್ಲದೆ, ಭೇಟಿಯಾಗದಿರಲು ಕಾರಣವನ್ನೂ ಪತ್ರದಲ್ಲಿ ತಿಳಿಸಿದ್ದು, ದೆಹಲಿಗೆ ಮರಳಿದ ಕೂಡಲೇ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

ಪತ್ರದಲ್ಲಿ ಆಡಳಿತಾರೂಢ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರ ಸಾಮೂಹಿಕ ಅಮಾನತು ಸರ್ಕಾರದಿಂದ ಪೂರ್ವನಿರ್ಧರಿತ ಮತ್ತು ಪೂರ್ವ ಯೋಜಿತವಾಗಿದೆ ಎಂದು ತೋರುತ್ತದೆ ಎಂದು ಆರೋಪಿಸಿದ್ದಾರೆ.

ಸಂಸದರನ್ನು ಅಮಾನತು ಮಾಡುವ ಮೂಲಕ 146 ಸಂಸದರ ಧ್ವನಿಯನ್ನು ಸರಕಾರ ಪರಿಣಾಮಕಾರಿಯಾಗಿ ಅಡಗಿಸುತ್ತಿದೆ. ಡಿಸೆಂಬರ್ 14 ರಂದು ನಡೆದ ಭದ್ರತಾ ಲೋಪ ಘಟನೆ ಬಗ್ಗೆ ಸಂಸತರ ಅಮಾನತುಗೊಳಿಸುವುದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಪ್ರತಿಕ್ರಿಯೆ ಕೇಳಲಾಗಿತ್ತು. ಆದರೆ, ಸದನದಲ್ಲಿ ಸಚಿವರು ಹೇಳಿಕೆಯನ್ನು ನೀಡಲಿಲ್ಲ. ಸದನದಲ್ಲಿ ಹೇಳಿಕೆ ನೀಡದೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಈ ಮೂಲಕ ಪ್ರಜಾಪ್ರಭುತ್ವ ಮಂದಿರವನ್ನು ಅಪಹಾಸ್ಯ ಮಾಡಿರುವುದು ವಿಷಾದನೀಯವಾದದ್ದು.

ಗೃಹ ಸಚಿವರು ರಾಜ್ಯಸಭೆಗೆ ಹಾಜರಾಗುವುದಕ್ಕೂ ಮುನ್ನು ಹೆಚ್ಚಿನ ಸಂಖ್ಯೆಯ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗುವುದು ಎಂದು ಕೇಂದ್ರ ಸಚಿವರೊಬ್ಬರು ವಿರೋಧ ಪಕ್ಷದ ನಾಯಕರಿಗೆ ತಿಳಿಸಿದ್ದರು. ಇಂತಹ ಬೆದರಿಕೆಗಳ ಬಗ್ಗೆ ಸಭಾಧ್ಯಕ್ಷಕರು ಪರಿಶೀಲಿಸಬೇಕೆಂದು ನಾವು ಬಯಸುತ್ತೇವೆ.

ಗಡಿಯಲ್ಲಿ ಚೀನಾ ಅತಿಕ್ರಮಣ, ಮಣಿಪುರದಲ್ಲಿ ಅಶಾಂತಿ ಸೇರಿದಂತೆ ಹಲವು ಗಂಭೀರ ವಿಚಾರಗಳ ಕುರಿತ ಚರ್ಚೆಯಲ್ಲಿ ಸರ್ಕಾರ ತಪ್ಪಿಸಿಕೊಂಡಿದೆ. ಇದನ್ನು ಸಭಾಧ್ಯಕ್ಷರು ಗಮನಿಸಬೇಕು. ಸಭಾಧ್ಯಕ್ಷರು ಸದನದ ಕಾವಲುಗಾರರಾಗಿದ್ದು, ಸದನದ ಘನತೆ ಕಾಪಾಡಬೇಕು, ಸಂಸದೀಯ ಸವಲತ್ತುಗಳನ್ನು ಕಾಪಾಡಬೇಕು. ಸಂಸತ್ತಿನಲ್ಲಿ ಕಲಾಪ, ಚರ್ಚೆ ಮತ್ತು ಉತ್ತರದ ಮೂಲಕ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವ ಹಕ್ಕು ಜನರಿಗಿದೆ.

ಹೀಗಾಗಿ ಅದನ್ನು ರಕ್ಷಿಸುವಲ್ಲಿ ನಾವು ಮುಂಚೂಣಿಯಲ್ಲಿರಬೇಕು. ಆದರೆ, ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಿದ್ದಕ್ಕಾಗಿ ಮತ್ತು ಸರ್ಕಾರದಿಂದ ಉತ್ತರದಾಯಿತ್ವವನ್ನು ಕೇಳದಿದ್ದಕ್ಕಾಗಿ ಸಭಾಧ್ಯಕ್ಷ ಮೇಲೆ ಅಸಮಾಧಾನವಿದೆ. ಸದನದಲ್ಲಿ ಕಲಾಪ ಮುಂದುವರೆಯಬೇಕೆಂಬ ಸಭಾಧ್ಯಕ್ಷ ಮಾತನ್ನು ನಾನು ಒಪ್ಪುತ್ತೇನೆ. ಆದರೆ, ಸದನದಲ್ಲಿ ಚರ್ಚೆ ನಡೆಸಲು ಸರ್ಕಾರ ಉತ್ಸುಕವಾಗಿರದಿದ್ದರೆ, ಚರ್ಚೆಗಳಿಗೆ ಉತ್ತರ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com