ಹೈದರಾಬಾದ್: ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದರೂ ರಾಜ್ಯದಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುವ ಆದೇಶವನ್ನು ಹೊರಡಿಸದ ಕರ್ನಾಟಕ ಸರ್ಕಾರವನ್ನು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ನಾಲ್ವರು ಭಾರತೀಯ ಸೇನಾ ಸಿಬ್ಬಂದಿಯನ್ನು ಹತ್ಯೆಗೈದಿರುವುದನ್ನು ಖಂಡಿಸಿದರು. ಮೂವರು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
'ಅವರು (ಕರ್ನಾಟಕದ ಕಾಂಗ್ರೆಸ್ ಸರ್ಕಾರ) ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದಿದೆ. ಆದರೂ, ಏಕೆ ಹಿಜಾಬ್ ಮೇಲಿನ ನಿಷೇಧ ಹಿಂತೆಗೆದುಕೊಂಡಿಲ್ಲ. ಸಭೆಯೊಂದರಲ್ಲಿ ಮಾತನಾಡಿದ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಪ್ರತಿಯೊಬ್ಬರು ಅವರಿಗೆ ಬೇಕಾದ ಉಡುಪನ್ನು ಧರಿಸಬಹುದೆಂದು ಹೇಳಿದರು. ಆದರೂ, ಇನ್ನೂ ಆದೇಶ ಹೊರಡಿಸಿಲ್ಲ. ಇದು ಅತ್ಯಂತ ದುರದೃಷ್ಟಕರ, ಕರ್ನಾಟಕದ ಮುಸ್ಲಿಮರು ನಿರಾಸೆ ಅನುಭವಿಸುತ್ತಿದ್ದಾರೆ' ಎಂದು ಅವರು ಹೇಳಿದರು.
ಹಿಜಾಬ್ ಮೇಲಿನ ನಿಷೇಧ ಹಿಂಪಡೆದುಕೊಳ್ಳುವ ಆದೇಶ ಹೊರಡಿಸಲು ಕೇವಲ 30 ನಿಮಿಷ ಸಾಕು. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ತಡೆಯುತ್ತಿರುವುದು ಏನು ಎಂದು ಪ್ರಶ್ನಿಸಿದರು.
ಹಿಜಾಬ್ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಮತ್ತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಸ್ಪಷ್ಟಪಡಿಸಿದ್ದಾರೆ.
‘ಸರ್ಕಾರದ ಕಸ್ಟಡಿಯಲ್ಲಿ ಮೂವರನ್ನು ಹತ್ಯೆಗೈದಿರುವ ಇಂದಿನ ಸರ್ಕಾರ ಈ ಅಪರಾಧದಿಂದ ಪಾರಾಗಲು ಸಾಧ್ಯವಿಲ್ಲ. ಹಾಗಾಗಿ ಪರಿಹಾರ, ಉದ್ಯೋಗ ನೀಡಿದರೆ ಸಾಲದು. ಈ ಮೂವರ ಕೊಲೆಯಲ್ಲಿ ಭಾಗಿಯಾದ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ಕೂಡಲೇ ಬಂಧಿಬೇಕು. ಇನ್ನೂ ಐವರು ಆಸ್ಪತ್ರೆಯಲ್ಲಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ, ಅವರಿಗೆ ಉತ್ತಮ ಚಿಕಿತ್ಸೆ ನೀಡಬೇಕು' ಎಂದು ಆಗ್ರಹಿಸಿದರು.
ಮೂವರು ನಾಗರಿಕರು ಗುಜ್ಜರ್ ಬಕರ್ವಾಲ್ ಸಮುದಾಯಕ್ಕೆ ಸೇರಿದವರು ಮತ್ತು ಅವರು ಯಾವಾಗಲೂ ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ನಿಂತಿದ್ದಾರೆ ಮತ್ತು ಯಾವಾಗಲೂ ಭಾರತೀಯ ಸೇನೆಗೆ ಸಹಾಯ ಮಾಡಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಒಳನುಸುಳುವಿಕೆ ಕಡಿಮೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಹೇಳಿದೆ. ಆದರೂ, ಭಯೋತ್ಪಾದಕರು ನಾಲ್ವರು ಭಾರತೀಯ ಸೈನಿಕರನ್ನು ಹೇಗೆ ಕೊಂದರು ಎಂದು ಪ್ರಶ್ನಿಸಿದರು.
Advertisement