ವ್ಯಾಪಾರಿ ಹಡಗಿನ ಮೇಲೆ ದಾಳಿ: ಅಟ್ಯಾಕ್ ಮಾಡಿದ ಡ್ರೋನ್‌ನ ಅವಶೇಷ ಪತ್ತೆ ಮಾಡಿದ ಭಾರತೀಯ ನೌಕಾಪಡೆ
ನವದೆಹಲಿ: ಅರಬ್ಬಿ ಸಮುದ್ರದಲ್ಲಿ ವ್ಯಾಪರ ಹಡಗಿನ ಮೇಲೆ ದಾಳಿ ಮಾಡಿದ್ದ ಡ್ರೋನ್ ನ ಅವಶೇಷಗಳನ್ನು ಕೊನೆಗೂ ಭಾರತೀಯ ನೌಕಾಪಡೆ ಪತ್ತೆ ಮಾಡಿದ್ದು, ಡ್ರೋನ್ ನಲ್ಲಿದ್ದ ಎಲ್ಲ ಸ್ಫೋಟಕಗಳನ್ನು ಸ್ಫೋಟಿಸುವ ಮೂಲಕ ನಾಶಪಡಿಸಿದೆ ಎಂದು ತಿಳಿದುಬಂದಿದೆ.
ವ್ಯಾಪಾರಿ ಹಡಗು ಎಂವಿ ಚೆಮ್ ಪ್ಲುಟೊಗೆ ಅಪ್ಪಳಿಸಿದ ಡ್ರೋನ್ ಅನ್ನು ಭಾರತೀಯ ನೌಕಾಪಡೆ ಸಿಬ್ಬಂದಿಗಳು ಪತ್ತೆ ಮಾಡಿದ್ದು, ಹೆಚ್ಚಿನ ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಭಾರತೀಯ ನೌಕಾಪಡೆಯು ಡ್ರೋನ್ ನ ಅವಶೇಷಗಳನ್ನು ಸಂಗ್ರಹಿಸಿತ್ತು. ಡ್ರೋನ್ ನಲ್ಲಿದ್ದ ಸ್ಫೋಟಕಗಳನ್ನು ಸೇನಾಧಿಕಾರಿಗಳು ನಾಶಪಡಿಸಿದ್ದಾರೆ. ಭಾರತದ ಪಶ್ಚಿಮ ಕರಾವಳಿಯಿಂದ 400 ಕಿಮೀ ದೂರದಲ್ಲಿ ಪಯಣಿಸುತ್ತಿದ್ದ ವ್ಯಾಪಾರಿ ಹಡಗು ಎಂವಿ ಚೆಮ್ ಪ್ಲುಟೊಗೆ ಡ್ರೋನ್ ಅಪ್ಪಳಿಸಿತ್ತು.
ಈ ದಾಳಿ ಬೆನ್ನಲ್ಲೇ ಹಡಗಿನ ರಕ್ಷಣೆಗೆ ಧಾವಿಸಿದ್ದ ಭಾರತೀಯ ನೌಕಾದಳ ಹಡಗಿಗೆ ಅಪ್ಪಳಿಸಿದ್ದ ಡ್ರೋನ್ ನ ಜಾಡು ಹಿಡಿದು ತನಿಖೆ ನಡೆಸಿತ್ತು. ಈ ವೇಳೆ ಪತ್ತೆಯಾದ ಡ್ರೋನ್ ನ ಅವಶೇಷಗಳನ್ನು ಈಗ ಮುಂಬೈನಲ್ಲಿರುವ ಸ್ಯಾನಿಟೈಸೇಶನ್ ಮತ್ತು ಪ್ರಾಥಮಿಕ ವಿಶ್ಲೇಷಣೆಗೊಳಪಡಿಸಿತ್ತು. ನಂತರ, ಸ್ಫೋಟಕ ಆರ್ಡನೆನ್ಸ್ ವಿಲೇವಾರಿ ತಜ್ಞರು ಡ್ರೋನ್‌ನಲ್ಲಿನ ಸ್ಫೋಟಕ "ಸಂಪೂರ್ಣವಾಗಿ ಸ್ಫೋಟಗೊಂಡು ವಾಟರ್‌ಲೈನ್‌ನ ಮೇಲೆ ವ್ಯಾಪಕ ಹಾನಿಯನ್ನುಂಟುಮಾಡಿತು" ಎಂದು ಹೇಳಿದ್ದಾರೆ.
ಅರೇಬಿಯನ್ ಸಮುದ್ರದಲ್ಲಿ ಇತ್ತೀಚಿನ ಕಡಲ ಘಟನೆಗಳ ಬೆಳಕಿನಲ್ಲಿ, ಭಾರತ ಈ ಪ್ರದೇಶದಲ್ಲಿ ಕೇಂದ್ರೀಕೃತ ಕಡಲ ಭದ್ರತಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಪ್ರದೇಶದಲ್ಲಿ ಭಾರತೀಯ ಯುದ್ಧನೌಕೆಗಳು ಮತ್ತು ವಾಯು ಕಣ್ಗಾವಲುಗಳ ಉಪಸ್ಥಿತಿಯನ್ನು ಹೆಚ್ಚಿಸಲಾಗಿದೆ. ರಾಷ್ಟ್ರೀಯ ಕಡಲ ಏಜೆನ್ಸಿಗಳ ಸಮನ್ವಯದಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪ್ರದೇಶದಲ್ಲಿ ಸಮುದ್ರದ ವ್ಯಾಪಾರಿ ಮಾರ್ಗಗಳ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತಿದೆ" ಎಂದು ನೌಕಾಪಡೆ ಹೇಳಿದೆ.
ಈಗಾಗಲೇ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಅರಬ್ಬಿ ಸಮುದ್ರದಲ್ಲಿ ವಿಧ್ವಂಸಕ ನೌಕೆಗಳನ್ನು ಸ್ಥಳಾಂತರಿಸಿವೆ. ಯುಕೆ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಅಥವಾ ಯುಕೆಎಂಟಿಒ ಡ್ರೋನ್ ದಾಳಿಯನ್ನು ವರದಿ ಮಾಡಿದ ಕೂಡಲೇ ಮೂರು ಯುದ್ಧನೌಕೆಗಳು - ಎಂವಿ ಮೊರ್ಮುಗೋ, ಕೊಚ್ಚಿ ಮತ್ತು ಕೋಲ್ಕತ್ತಾ - ಮತ್ತು ಕಡಲ ಗಸ್ತು ವಿಮಾನವನ್ನು ಶನಿವಾರ ನಿಯೋಜಿಸಲಾಯಿತು.
ಯೆಮೆನ್‌ನ ಹೌತಿ ಬಂಡುಕೋರ ಗುಂಪು ಗಾಜಾದಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಕೆಂಪು ಸಮುದ್ರದ ಹಡಗು ಮಾರ್ಗದಲ್ಲಿ ಹಡಗುಗಳ ಮೇಲೆ ತನ್ನ ದಾಳಿಯನ್ನು ಹೆಚ್ಚಿಸುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ