ಚೆನ್ನೈ: ಸಬ್‌ಸೀ ಪೈಪ್‌ಲೈನ್‌ನಿಂದ ಅಮೋನಿಯಾ ಅನಿಲ ಸೋರಿಕೆ; ಹಲವಾರು ಜನರು ಆಸ್ಪತ್ರೆಗೆ ದಾಖಲು

ಉತ್ತರ ಚೆನ್ನೈನ ಕಡಲತೀರದಲ್ಲಿರುವ ರಸಗೊಬ್ಬರ ತಯಾರಿಕಾ ಘಟಕಕ್ಕೆ ಜೋಡಿಸಲಾದ ಸಬ್‌ಸೀ ಪೈಪ್‌ಲೈನ್‌ನಿಂದ ಅಮೋನಿಯಾ ಅನಿಲ ಸೋರಿಕೆಯಾಗಿದ್ದು, ಉಸಿರಾಟದ ತೊಂದರೆ, ವಾಕರಿಕೆ ಮತ್ತು ಮೂರ್ಛೆಯಿಂದ ಬಳಲುತ್ತಿದ್ದ ಸುಮಾರು 25 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಅಮೋನಿಯಾ ಅನಿಲ ಸೋರಿಕೆಯಿಂದ ಅಸ್ವಸ್ಥಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಅಮೋನಿಯಾ ಅನಿಲ ಸೋರಿಕೆಯಿಂದ ಅಸ್ವಸ್ಥಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
Updated on

ಚೆನ್ನೈ: ಉತ್ತರ ಚೆನ್ನೈನ ಕಡಲತೀರದಲ್ಲಿರುವ ರಸಗೊಬ್ಬರ ತಯಾರಿಕಾ ಘಟಕಕ್ಕೆ ಜೋಡಿಸಲಾದ ಸಬ್‌ಸೀ ಪೈಪ್‌ಲೈನ್‌ನಿಂದ ಅಮೋನಿಯಾ ಅನಿಲ ಸೋರಿಕೆಯಾಗಿದ್ದು, ಉಸಿರಾಟದ ತೊಂದರೆ, ವಾಕರಿಕೆ ಮತ್ತು ಮೂರ್ಛೆಯಿಂದ ಬಳಲುತ್ತಿದ್ದ ಸುಮಾರು 25 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

ಡಿಸೆಂಬರ್ 26 ರಂದು ರಾತ್ರಿ 11.45 ರ ಸುಮಾರಿಗೆ ಅನಿಲ ಸೋರಿಕೆಯಾಗಿದ್ದು, ನಂತರ ಉತ್ತರ ಚೆನ್ನೈ ಪ್ರದೇಶಗಳಲ್ಲಿನ ಜನರು ತೀವ್ರ ಅಸ್ವಸ್ಥರಾಗಿದ್ದಾರೆ. ಗಂಟಲು ಮತ್ತು ಎದೆಯಲ್ಲಿ 'ಸುಡುವ ಸಂವೇದನೆ' ಅನುಭವಿಸಿದ ನಂತರ ಹಲವಾರು ವ್ಯಕ್ತಿಗಳು ಮೂರ್ಛೆ ಹೋಗಿದ್ದಾರೆ.

ನಿದ್ದೆಯಲ್ಲಿದ್ದ ಅನೇಕ ಜನರು ಗಾಬರಿಯಿಂದ ಎದ್ದು, ತಮ್ಮ ಮನೆಗಳಿಂದ ಹೊರಗೆ ಓಡಿಬಂದು ನೆರೆಹೊರೆಯವರನ್ನು ಎಚ್ಚರಿಸಿದ್ದಾರೆ. ಅವರೆಲ್ಲರೂ ಏನು ಮಾಡಬೇಕೆಂದು ತಿಳಿಯದೆ ಮುಖ್ಯ ರಸ್ತೆಗಳನ್ನು ತಲುಪಿದ್ದಾರೆ.

ರಸಗೊಬ್ಬರ ತಯಾರಿಕಾ ಘಟಕದ ಸಮೀಪದಲ್ಲಿ ವಾಸಿಸುತ್ತಿದ್ದ ಮಕ್ಕಳು ಸೇರಿದಂತೆ ಸುಮಾರು 25 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಅಸ್ವಸ್ಥತೆ, ಉಸಿರಾಟದ ತೊಂದರೆ, ವಾಕರಿಕೆ ಮತ್ತು ಮೂರ್ಛೆಯಿಂದ ಬಳಲುತ್ತಿದ್ದಾರೆ. ಉತ್ತರ ಚೆನ್ನೈನ ಚಿನ್ನ ಕುಪ್ಪಂ, ಪೆರಿಯಾ ಕುಪ್ಪಂ, ನೇತಾಜಿ ನಗರ, ಬರ್ಮಾ ನಗರಗಳು ಪೀಡಿತ ಪ್ರದೇಶಗಳಾಗಿವೆ.

ಜನರು ಮಧ್ಯರಾತ್ರಿ ಆಸ್ಪತ್ರೆಗೆ ತೆರಳಲು ವಾಹನಗಳನ್ನು ಹುಡುಕಲು ಮುಂದಾಗಿದ್ದರು. ಆಟೋರಿಕ್ಷಾಗಳು ಮತ್ತು ಮೋಟಾರ್‌ಸೈಕಲ್‌ಗಳ ಮೂಲಕ ಸಂತ್ರಸ್ತರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಂತಿಭೇದಿಯಿಂದ ವೃದ್ಧೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅಧಿಕಾರಿಗಳು ಬಸ್‌ಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದ್ದಾರೆ.

ಮಧ್ಯರಾತ್ರಿಯಲ್ಲಿ ಬೀಚ್‌ಫ್ರಂಟ್‌ನಲ್ಲಿ ಇದ್ದ ಕೆಲವು ಮೀನುಗಾರರು ಮತ್ತು ಸ್ಥಳೀಯರು ಸಮುದ್ರದ ಪೈಪ್‌ಲೈನ್‌ನ ಮೇಲಿರುವ ಆಯ್ದ ಸ್ಥಳಗಳಿಂದ ಅಸಾಮಾನ್ಯ ಶಬ್ದ ಮತ್ತು ನೀರು ಹೊರಬರುವುದನ್ನು ಗಮನಿಸಿದ್ದಾರೆ.

ಇಲ್ಲಿನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಭೇಟಿ ನೀಡಿ ಗ್ಯಾಸ್ ಸೋರಿಕೆ ಪೀಡಿತ ಪ್ರದೇಶಗಳಿಂದ ದಾಖಲಾದ ಜನರೊಂದಿಗೆ ಮಾತನಾಡಿದರು ಮತ್ತು ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ಮುರುಗಪ್ಪ ಗ್ರೂಪ್ ಕಂಪನಿಯ ಕೋರಮಂಡಲ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಹೇಳಿಕೆ ಬಿಡುಗಡೆ ಮಾಡಿದ್ದು, 'ದಿನನಿತ್ಯದ ಕಾರ್ಯಾಚರಣೆಯ ಭಾಗವಾಗಿ, ನಾವು 26/12/2023 ರಂದು 23.30 ಗಂಟೆಯ ಸಮಯದಲ್ಲಿ ಸ್ಥಾವರ ಆವರಣದ ಹೊರಭಾಗದಲ್ಲಿ ಅಮೋನಿಯಾ ಇಳಿಸುವ ಸಬ್‌ಸೀ ಪೈಪ್‌ಲೈನ್‌ನಲ್ಲಿ ಅಸಹಜತೆಯನ್ನು ಗಮನಿಸಿದ್ದೇವೆ. ನಮ್ಮ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ತಕ್ಷಣವೇ ಸಕ್ರಿಯಗೊಳಿಸಲಾಗಿದೆ. ನಾವು ಅಮೋನಿಯಾ ಸಿಸ್ಟಮ್ ಸೌಲಭ್ಯವನ್ನು ಪ್ರತ್ಯೇಕಿಸಿದ್ದೇವೆ ಮತ್ತು ಕಡಿಮೆ ಸಮಯದಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತಂದಿದ್ದೇವೆ' ಎಂದಿದೆ.

'ಸ್ಥಳೀಯರಲ್ಲಿ ಕೆಲವರು ಅಸ್ವಸ್ಥರಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಾಲಿಗಿದೆ. ಸದ್ಯ ಎಲ್ಲರೂ ಸುರಕ್ಷಿತವಾಗಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಘಟನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಕೋರಮಂಡಲ್ ಯಾವಾಗಲೂ ಅತ್ಯುನ್ನತ ಸುರಕ್ಷತಾ ಮಾನದಂಡಗಳು ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗೆ ಬದ್ಧವಾಗಿದೆ' ಎಂದಿದೆ.

ಕಂಪನಿಯ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಿದ ನಂತರ, ಪೊಲೀಸರು ರಸ್ತೆಗಳಲ್ಲಿ ಜಮಾಯಿಸಿದ್ದ ಜನರನ್ನು ಸಮಾಧಾನಪಡಿಸಿದರು ಮತ್ತು 'ಯಾವುದೇ ಸಮಸ್ಯೆ ಇಲ್ಲ' ಎಂದು ತಮ್ಮ ಮನೆಗಳಿಗೆ ಹಿಂತಿರುಗುವಂತೆ ವಿನಂತಿಸಿದರು. ಇದರಿಂದ ರೊಚ್ಚಿಗೆದ್ದ ನಿವಾಸಿಗಳು ಇಂದು ಬೆಳಗ್ಗೆ ಗೊಬ್ಬರ ತಯಾರಿಕಾ ಕಂಪನಿ ಆವರಣದ ಎದುರು ಜಮಾಯಿಸಿ ಘೋಷಣೆಗಳನ್ನು ಕೂಗಿ ಘಟಕವನ್ನು ಕೂಡಲೇ ಮುಚ್ಚುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com