ಜೋಶಿಮಠದ ಬಳಿಕ ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಮನೆಗಳಲ್ಲಿ ಬಿರುಕು; 19 ಕುಟುಂಬಗಳ ಸ್ಥಳಾಂತರ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಮನೆಗಳು ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಹತ್ತೊಂಬತ್ತು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ದೋಡೋ ಜಿಲ್ಲೆಯ ಮನೆಗಳಲ್ಲಿ  ಬಿರುಕು ಕಾಣಿಸಿಕೊಳ್ಳುತ್ತಿದೆ
ಜಮ್ಮು ಮತ್ತು ಕಾಶ್ಮೀರದ ದೋಡೋ ಜಿಲ್ಲೆಯ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ
Updated on

ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಮನೆಗಳು ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಹತ್ತೊಂಬತ್ತು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕಿಶ್ತ್ವಾರ್-ಬಟೋಟೆ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ದೋಡಾ ಪಟ್ಟಣದಿಂದ 35 ಕಿಲೋಮೀಟರ್ ದೂರದಲ್ಲಿರುವ ಥಾತ್ರಿಯ ನಾಯ್ ಬಸ್ತಿ ಗ್ರಾಮದಲ್ಲಿನ ಮಸೀದಿ ಮತ್ತು ಹೆಣ್ಣುಮಕ್ಕಳ ಧಾರ್ಮಿಕ ಶಾಲೆ  ಅಸುರಕ್ಷಿತ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.

ಗ್ರಾಮದಲ್ಲಿ ಕೆಲವು ಕಟ್ಟಡಗಳು ಒಂದೆರಡು ದಿನಗಳ ಹಿಂದೆ ಬಿರುಕು ಬಿಡಲು ಪ್ರಾರಂಭಿಸಿದವು. ಆದರೆ, ಗುರುವಾರ ಭೂಕುಸಿತದಿಂದ ಪರಿಸ್ಥಿತಿ ಉಲ್ಬಣಗೊಂಡಿದ್ದು, ಹಾನಿಗೊಳಗಾದ ಕಟ್ಟಡಗಳ ಸಂಖ್ಯೆ 21ಕ್ಕೆ ತಲುಪಿದೆ.

ಅವರ ಮನೆಗಳು ಅಸುರಕ್ಷಿತವಾದ ನಂತರ ನಾವು 19 ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದೇವೆ. ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಮತ್ತು ಅವರ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಥಾತ್ರಿ) ಅಥರ್ ಅಮೀನ್ ಜರ್ಗರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು.

ಆದಾಗ್ಯೂ, ಪ್ರಸಿದ್ಧ ಯಾತ್ರಾಸ್ಥಳಗಳಾದ ಬದರಿನಾಥ್ ಮತ್ತು ಹೇಮಕುಂಡ್ ಸಾಹಿಬ್‌ಗೆ ಪ್ರವೇಶದ್ವಾರವಾಗಿರುವ ಉತ್ತರಾಖಂಡದ ಜೋಶಿಮಠದ ಪರಿಸ್ಥಿತಿಗೆ ಹೋಲಿಸಲು ಜರ್ಗರ್ ನಿರಾಕರಿಸಿದರು.  ಜೋಶಿಮಠವು ಭೂ ಕುಸಿತದಿಂದಾಗಿ ಪ್ರಮುಖ ಸವಾಲನ್ನು ಎದುರಿಸುತ್ತಿದೆ.

ನಾಯ್ ಬಸ್ತಿಯಲ್ಲಿನ ಪರಿಸ್ಥಿತಿಯನ್ನು ಮುಳುಗುತ್ತಿರುವ ಜೋಶಿಮಠದ ಪಟ್ಟಣದೊಂದಿಗೆ ಹೋಲಿಸುವುದು ಉತ್ಪ್ರೇಕ್ಷೆಯಾಗುತ್ತದೆ. ನಾವು ಭೂಕುಸಿತದ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಮತ್ತು ಚೆನಾಬ್ ಕಣಿವೆಯ ವಿದ್ಯುತ್ ಯೋಜನೆಗಳು ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂವಿಜ್ಞಾನಿಗಳು ಈಗಾಗಲೇ ಸ್ಥಳವನ್ನು ಪರಿಶೀಲಿಸಿದ್ದಾರೆ ಎಂದು ಜರ್ಗರ್ ಹೇಳಿದರು.

ಕೆಲವು ಕುಟುಂಬಗಳು ಜಿಲ್ಲಾಡಳಿತದ ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಗೊಂಡಿದ್ದರೆ, ಇನ್ನೂ ಅನೇಕ ಕುಟುಂಬಗಳು ತಮ್ಮ ಪೂರ್ವಜರ ಮನೆಗಳಿಗೆ ಮರಳಿದ್ದಾರೆ. ನಾವು ಆಶ್ರಯ ತಾಣದಲ್ಲಿ ಆಹಾರ ಮತ್ತು ವಿದ್ಯುತ್ ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ ಎಂದು ಜರ್ಗರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com