ಷಹಜಹಾನ್ ಪುಣ್ಯತಿಥಿ: ಫೆ.17 ರಿಂದ 3 ದಿನ ತಾಜ್ ಮಹಲ್‌ಗೆ ಉಚಿತ ಪ್ರವೇಶ
ಆಗ್ರ: ಮೊಘಲ್ ಚಕ್ರವರ್ತಿ ಷಹಜಹಾನ್ ಅವರ 368ನೇ ಪುಣ್ಯತಿಥಿಯ ಸ್ಮರಣಾರ್ಥ ಆಗ್ರಾದ ತಾಜ್ ಮಹಲ್‌ಗೆ ಫೆಬ್ರವರಿ 17 ರಿಂದ ಮೂರು ದಿನಗಳವರೆಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಚಾದರ್ ಪೋಶಿ, ಸಂದಲ್, ಗುಸುಲ್ ಮತ್ತು ಕುಲ್ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ.
ಷಹಜಹಾನ್ ಅವರ ವಾರ್ಷಿಕ ಉರ್ಸ್ ಸಂದರ್ಭದಲ್ಲಿ ಫೆಬ್ರವರಿ 17, 18 ಮತ್ತು 19 ರಿಂದ ತಾಜ್ ಮಹಲ್‌ನಲ್ಲಿ ಪ್ರವಾಸಿಗರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಆಗ್ರಾ ಸರ್ಕಲ್‌ನ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ರಾಜ್ ಕುಮಾರ್ ಪಟೇಲ್ ಅವರು ತಿಳಿಸಿದ್ದಾರೆ.
"ಪ್ರವಾಸಿಗರಿಗೆ ಫೆಬ್ರವರಿ 17 ಮತ್ತು 18 ರಂದು ಮಧ್ಯಾಹ್ನ 2 ಗಂಟೆಯ ನಂತರ ಸೂರ್ಯಾಸ್ತದವರೆಗೆ ಉಚಿತ ಪ್ರವೇಶವಿರುತ್ತದೆ ಮತ್ತು ಫೆಬ್ರವರಿ 19 ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಚಿತ ಪ್ರವೇಶವಿರುತ್ತದೆ" ಎಂದು ಅವರು ಹೇಳಿದ್ದಾರೆ.
ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ಅನುಮೋದಿತ ಪ್ರವಾಸಿ ಮಾರ್ಗದರ್ಶಕರ ಸಂಘದ ಅಧ್ಯಕ್ಷ ಶಂಸುದ್ದೀನ್ ಖಾನ್ ಅವರು ತಿಳಿಸಿದ್ದಾರೆ.
"ಉರ್ಸ್'ನ ಕೊನೆಯ ದಿನದಂದು 1,880 ಮೀಟರ್ ಉದ್ದದ ಚಾದರ್ ಅನ್ನು ಅರ್ಪಿಸಲಾಗುವುದು. 'ಚಾದರ್ ಪೋಶಿ' ಎಲ್ಲಾ ಧರ್ಮದ ಜನರನ್ನು ಆಕರ್ಷಿಸುತ್ತದೆ" ಖಾನ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ