ಚುನಾವಣಾ ಪೈಪೋಟಿಗೆ ಹೆದರಿ ರಾಮಗಢ ಉಪಚುನಾವಣೆಗೂ ಮುನ್ನ AJSU ನಾಯಕ ಮನೋಜ್ ಮುಂಡಾಗೆ ಗುಂಡಿಕ್ಕಿ ಹತ್ಯೆ

ಜಾರ್ಖಂಡ್‌ನ ರಾಮಗಢ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ನಡುವೆಯೇ ಎಜೆಎಸ್‌ಯು ಪಕ್ಷದ ಪ್ರಬಲ ನಾಯಕ ಮನೋಜ್ ಮುಂಡಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಂಚಿ: ಜಾರ್ಖಂಡ್‌ನ ರಾಮಗಢ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ನಡುವೆಯೇ ಎಜೆಎಸ್‌ಯು ಪಕ್ಷದ ಪ್ರಬಲ ನಾಯಕ ಮನೋಜ್ ಮುಂಡಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ಈ ಘಟನೆ ಹಿಂದೆ ಚುನಾವಣಾ ದ್ವೇಷ ಇರಬಹುದೆಂಬ ಆತಂಕ ವ್ಯಕ್ತವಾಗುತ್ತಿದೆ. ಈ ಉಪಚುನಾವಣೆಯಲ್ಲಿ ಪ್ರಮುಖ ಸ್ಪರ್ಧೆಯು ಎನ್‌ಡಿಎ ಘಟಕ ಎಜೆಎಸ್‌ಯು ಪಕ್ಷ ಮತ್ತು ಕಾಂಗ್ರೆಸ್ ನಡುವೆ ಇತ್ತು.

ಇಂದು ಅಮ್‌ಝರಿಯಾ ಗ್ರಾಮದ ಝಂಜಿ ಟೋಲಿ ವಾರದ ಮಾರುಕಟ್ಟೆಯಲ್ಲಿ ಯಾವುದೋ ಕೆಲಸದ ನಿಮಿತ್ತ ಮನೋಜ್ ಮುಂಡಾ ಅಲ್ಲಿಗೆ ತೆರಳಿದ್ದ ವೇಳೆ ಆತನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಕೆಲವರು ಆತನನ್ನು ಹಿಡಿದು ಮಾರುಕಟ್ಟೆಯಿಂದ ಸ್ವಲ್ಪ ದೂರಕ್ಕೆ ಕರೆದೊಯ್ದು ತಲೆಗೆ ಗುಂಡು ಹಾರಿಸಿದ್ದಾರೆ. ಇದಾದ ಬಳಿಕ ಪಾತಕಿಗಳು ಆರಾಮವಾಗಿ ಅಲ್ಲಿಂದ ತೆರಳಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮನೋಜ್ ಮುಂಡಾ ಅವರನ್ನು ರಾಂಚಿಯ RIMS ಗೆ ಕರೆತರಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಪತ್ರಾಟು ಎಸ್‌ಡಿಪಿಒ ಡಾ.ವೀರೇಂದ್ರ ಚೌಧರಿ, ಸರ್ಕಲ್ ಇನ್ಸ್‌ಪೆಕ್ಟರ್ ರೋಹಿತ್ ಮಹತೋ, ಘಟನೆ ಕುರಿತು ಮಾಹಿತಿ ಪಡೆದು ಸಶಸ್ತ್ರ ಪಡೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದರ ಹಿಂದೆ ನಕ್ಸಲೀಯರ ಕೈವಾಡ ಇರಬಹುದು ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲ ಸಮಯದ ಹಿಂದೆ ನಕ್ಸಲೀಯ ಘಟನೆಗೆ ಸಂಬಂಧಿಸಿದಂತೆ ಮನೋಜ್ ಮುಂಡಾ ಅವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಏತನ್ಮಧ್ಯೆ, ಎಜೆಎಸ್‌ಯು ಪಕ್ಷದ ಮುಖಂಡರು ಈ ಹತ್ಯಾಕಾಂಡವನ್ನು ಖಂಡಿಸಿದ್ದಾರೆ. ಕ್ರಿಮಿನಲ್‌ಗಳ ಬಲದ ಮೇಲೆ ಮತದಾರರಲ್ಲಿ ಭೀತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ. ಫೆಬ್ರವರಿ 27ರಂದು ರಾಮಗಢ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಎಜೆಎಸ್‌ಯು ಪಕ್ಷವು ಗಿರಿದಿಹ್ ಸಂಸದ ಚಂದ್ರಪ್ರಕಾಶ್ ಚೌಧರಿ ಅವರ ಪತ್ನಿ ಸುನೀತಾ ದೇವಿ ಅವರನ್ನು ಕಣಕ್ಕಿಳಿಸಿದೆ. ಆದರೆ ಕಾಂಗ್ರೆಸ್ ಮಾಜಿ ಶಾಸಕಿ ಮಮತಾ ದೇವಿ ಅವರ ಪತಿ ಬಜರಂಗ್ ಮಹತೋ ಅವರನ್ನು ಕಣಕ್ಕಿಳಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಎಜೆಎಸ್‌ಯುವನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಈ ಕ್ಷೇತ್ರವನ್ನು ವಶಪಡಿಸಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com