ಭಾರತ ಈಗ ಕುಸಿಯುತ್ತಿದೆ: ಮೋದಿ ಟೀಕಿಸಿದ್ದ ಜಾರ್ಜ್ ಸೊರೊಸ್'ಗೆ ಮೂರು ಪದಗಳಲ್ಲಿ ತಿರುಗೇಟು ನೀಡಿದ ಜೈಶಂಕರ್

ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಅವರನ್ನು ಟೀಕಿಸಿದ್ದ ಅಮೆರಿಕಾದ ಕೋಟ್ಯಾಧಿಪತಿ ಜಾರ್ಜ್ ಸೊರೊಸ್ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮೂರು ಪದಗಳಲ್ಲಿ ತಿರುಗೇಟು ನೀಡಿದ್ದಾರೆ.
ಎಸ್.ಜೈಶಂಕರ್
ಎಸ್.ಜೈಶಂಕರ್
Updated on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಅವರನ್ನು ಟೀಕಿಸಿದ್ದ ಅಮೆರಿಕಾದ ಕೋಟ್ಯಾಧಿಪತಿ ಜಾರ್ಜ್ ಸೊರೊಸ್ ವಿರುದ್ಧ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮೂರು ಪದಗಳಲ್ಲಿ ತಿರುಗೇಟು ನೀಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವಿದೇಶಾಂಗ ಸಚಿವ ಜೈಶಂಕರ್‌ ಅವರು, ಜಾರ್ಜ್ ಸೊರೊಸ್ ವಿರುದ್ಧ ಕಿಡಿಕಾರಿದರು.

ವಯಸ್ಸಾದ, ಶ್ರೀಮಂತ, ಅಪಾಯಕಾರಿ ವ್ಯಕ್ತಿಯೆಂದು ಜಾರ್ಜ್ ಸೊರೊಸ್ ವಿರುದ್ಧ ಜೈಶಂಕರ್ ಅವರು ಕಿಡಿಕಾರಿದ್ದು, ಚುನಾವಣೆ ಫಲಿತಾಂಶಗಳು ತಮ್ಮ ಇಚ್ಛೆಯಂತೆ ಇಲ್ಲದೆ ಇರುವಂತಹ ಸಂದರ್ಭದಲ್ಲಿ ಸೊರೊಸ್‌ನಂತವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಶ್ನಿಸಲು ಆರಂಭಿಸುತ್ತಾರೆಂದು ಹೇಳಿದ್ದಾರೆ.

"ಕೆಲವು ವರ್ಷಗಳ ಹಿಂದೆ ಭಾರತದ ಲಕ್ಷಾಂತರ ಮುಸ್ಲಿಮರ ಪೌರತ್ವವನ್ನು ನಾವು ಕಸಿದುಕೊಳ್ಳಲು ಯೋಜಿಸಿದ್ದೇವೆ ಎಂದು ಅವರು ಆರೋಪಿಸಿದ್ದರು. ಆದರೆ, ಅದಾಗಲಿಲ್ಲ. ಅದೊಂದು ಹಾಸ್ಪಾಸ್ಪದ ಹೇಳಿಕೆಯಾಗಿತ್ತು. ಇದರ ಅರ್ಥ ಏನೆಂದು ನೀವೇ ಅರ್ಥ ಮಾಡಿಕೊಳ್ಳಬೇಕು. ಸೊರೊಸ್‌ ಅವರು ನ್ಯೂಯಾರ್ಕ್‌ನಲ್ಲಿ ಕುಳಿತಿರುವ ವಯಸ್ಸಾದ, ಶ್ರೀಮಂತ, ಅಪಾಯಕಾರಿ ವ್ಯಕ್ತಿಯಾಗಿ ನನಗೆ ಕಾಣಿಸುತ್ತಾರೆ. ಅವರು ತಮ್ಮ ದೃಷ್ಟಿಕೋನಗಳ ರೀತಿಯೇ ಜಗತ್ತು ನಡೆಯಬೇಕು ಎಂದು ಈಗಲೂ ಬಯಸುತ್ತಿದ್ದಾರೆ" ಎಂದು ಹೇಳಿದರು.

"ವಯಸ್ಸಾದ, ಶ್ರೀಮಂತ ಮತ್ತು ಅಭಿಪ್ರಾಯ ಮಾತ್ರ ಆಗಿದ್ದರೆ ನಾನು ಅವರ ಮಾತನ್ನು ಕಡೆಗಣಿಸಬಹುದಿತ್ತು. ಆದರೆ, ಆತ ವಯಸ್ಸಾದ, ಶ್ರೀಮಂತ, ಅಭಿಪ್ರಾಯ ಮತ್ತು ಅಪಾಯಕಾರಿ ವ್ಯಕ್ತಿಯಾಗಿದ್ದಾರೆ. ಇಂತಹ ಜನರು ಜನಾಭಿಪ್ರಾಯ ಮೂಡಿಸಲು ಹೂಡಿಕೆ ಮಾಡಿದಾಗ ಏನಾಗುತ್ತದೆ?ʼ ಎಂದು ಅವರು ಪ್ರಶ್ನಿಸಿದ್ದಾರೆ.

92 ವರ್ಷದ ಜಾರ್ಜ್ ಸೊರೊಸ್ ಅವರು ಗುರುವಾರ 2023ರ ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಷಣ ಮಾಡುವಾಗ, ಗೌತಮ್ ಅದಾನಿ ಅವರ ವ್ಯವಹಾರದ ತೊಂದರೆಗಳಿಂದ ಪ್ರಧಾನಿ ಮೋದಿ ದುರ್ಬಲರಾಗುತ್ತಾರೆ ಎಂದು ಹೇಳಿದ್ದರು.

‘ಅದಾನಿ ಹಗರಣವು ಭಾರತದ ಒಕ್ಕೂಟ ಸರ್ಕಾರದಲ್ಲಿ ಮೋದಿ ಹಿಡಿತವನ್ನು ದುರ್ಬಲಗೊಳಿಸಲಿದೆ ಮತ್ತು ಬಹು ಅಪೇಕ್ಷಿತ ಸಾಂಸ್ಥಿಕ ಸುಧಾರಣೆಗೆ ಕಾರಣವಾಗಲಿದೆ. ಈ ವಿಷಯದಲ್ಲಿ ನಾನು ನಿಷ್ಕಪಟಿ ಇರಬಹುದು. ಆದರೆ ಭಾರತದಲ್ಲಿ ಪ್ರಜಾಪ್ರಭುತ್ವ ಪುನರುಜ್ಜೀವನ ಆಗಬೇಕು ಎಂದು ಬಯಸುತ್ತೇನೆ’ ಎಂದು ತಿಳಿಸಿದ್ದರು.

ಜೊತೆಗೆ ತಾವು ಆರಂಭಿಸಿರುವ ಓಪನ್‌ ಸೊಸೈಟಿ ಫೌಂಡೇಷನ್‌ ಕುರಿತು ಪ್ರಸ್ತಾಪಿಸಿದ ಸೊರೋಸ್‌, ‘ನಿರ್ಬಂಧಿತ ಸಮಾಜಕ್ಕೆ ಹೋಲಿಸಿದರೆ ಮುಕ್ತ ಸಮಾಜ ಹೆಚ್ಚು ಉನ್ನತ ಮಟ್ಟದ್ದು ಎಂಬುದು ನನ್ನ ನಂಬಿಕೆ. ಇಲ್ಲಿ ಭಾರತ ಕೂಡಾ ಒಂದು ಕುತೂಹಲಕಾರಿ ಪ್ರಕರಣ. ಭಾರತ ಪ್ರಜಾಪ್ರಭುತ್ವ ದೇಶ. ಆದರೆ ಅದರ ನಾಯಕ ನರೇಂದ್ರ ಮೋದಿ ಪ್ರಜಾಪ್ರಭುತ್ವವಾದಿಯಲ್ಲ. ನರೇಂದ್ರ ಮೋದಿ ಮುಕ್ತ ಮತ್ತು ನಿರ್ಬಂಧಿತ ಎರಡೂ ಸಮಾಜದ ಜೊತೆಗೆ ಆಪ್ತ ಸಂಬಂಧ ಹೊಂದಿದ್ದಾರೆ. ಭಾರತ ಕ್ವಾಡ್‌ (ಆಸ್ಪ್ರೇಲಿಯಾ, ಅಮೆರಿಕ, ಜಪಾನ್‌) ದೇಶಗಳ ಸದಸ್ಯ ದೇಶ. ಆದರೆ ಅದು ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿ ಮೂಲಕ ಹಣ ಮಾಡುತ್ತಿದೆ’ ಎಂದು ಪರೋಕ್ಷವಾಗಿ ಭಾರತದ ವಿರುದ್ಧ ಕಿಡಿಕಾರಿದ್ದರು.

ಬಳಿಕ ಟರ್ಕಿ ಅಧ್ಯಕ್ಷ ತಯ್ಯಿಪ್‌ ಎರ್ಡೋಗನ್‌ ವಿಷಯ ಪ್ರಸ್ತಾಪಿಸುವಾಗಲೂ ಮತ್ತೆ ಮೋದಿಯನ್ನು ಎಳೆತಂದ ಸೊರೋಸ್‌, ‘ಎರ್ಡೋಗನ್‌, ಮೋದಿಯ ಜೊತೆಗೆ ಹಲವು ಸಾಮ್ಯತೆ ಹೊಂದಿದ್ದಾರೆ. ಆದರೆ ಇತ್ತೀಚಿನವರೆಗೂ ಮೋದಿ ತಮ್ಮ ಸ್ಥಾನದಲ್ಲಿ ಭದ್ರವಾಗಿದ್ದರು, ಆದರೆ ಎರ್ಡೋಗನ್‌ ಟರ್ಕಿ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಿ ಇದೀಗ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ’ ಎಂದು ಹೇಳಿದರು.

ತಮ್ಮ ಸುದೀರ್ಘ ಭಾಷಣದಲ್ಲಿ ಸೊರೋಸ್‌, ಹವಾಮಾನ ಬದಲಾವಣೆ, ರಷ್ಯಾ-ಉಕ್ರೇನ್‌ ಯುದ್ಧ, ಅಮೆರಿಕದ ಬೆಳವಣಿಗೆ, ಟರ್ಕಿ ಭೂಕಂಪ, ಚೀನಾದ ವೈಫಲ್ಯ, ಅದಾನಿ ಹಗರಣದ ಮೊದಲಾದ ವಿಷಯಗಳ ಕುರಿತು ಮಾತನಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com