ಗೋಧ್ರಾ ರೈಲು ದಹನ: 11 ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಒತ್ತಾಯ; ಸುಪ್ರೀಂ ಕೋರ್ಟ್‌ಗೆ ಗುಜರಾತ್ ಸರ್ಕಾರ

2002ರಲ್ಲಿ ಗುಜರಾತ್‌ನ ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನೇ ವಿಧಿಸುವಂತೆ ಒತ್ತಾಯಿಸುವುದಾಗಿ ಗುಜರಾತ್ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 
ಗೋಧ್ರಾ ಹಿಂಸಾಚಾರ
ಗೋಧ್ರಾ ಹಿಂಸಾಚಾರ
Updated on

ನವದೆಹಲಿ: 2002ರಲ್ಲಿ ಗುಜರಾತ್‌ನ ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 11 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನೇ ವಿಧಿಸುವಂತೆ ಒತ್ತಾಯಿಸುವುದಾಗಿ ಗುಜರಾತ್ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

2017ರ ಅಕ್ಟೋಬರ್‌ನಲ್ಲಿ ಗುಜರಾತ್ ಹೈಕೋರ್ಟ್ 11 ಅಪರಾಧಿಗಳ ಮರಣದಂಡನೆಯನ್ನು ಕಠಿಣ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. 

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ಪ್ರಕರಣದ ಹಲವು ಆರೋಪಿಗಳ ಜಾಮೀನು ಅರ್ಜಿಗಳನ್ನು ಮೂರು ವಾರಗಳ ನಂತರ ವಿಚಾರಣೆಗೆ ನಿಗದಿಪಡಿಸಿದೆ.

'ಅಪರಾಧಿಗಳಿಗೆ ನೀಡಲಾದ ನಿಜವಾದ ಶಿಕ್ಷೆ ಮತ್ತು ಇದುವರೆಗೆ ಜೈಲಿನಲ್ಲಿ ಕಳೆದ ಅವಧಿಯಂತಹ ವಿವರಗಳನ್ನು ಒಳಗೊಂಡಿರುವ ಕ್ರೋಢೀಕೃತ ಚಾರ್ಟ್ ಅನ್ನು ಸಲ್ಲಿಸಲು ಎರಡೂ ಕಡೆಯ ವಕೀಲರನ್ನು ಸುಪ್ರೀಂ ಕೇಳಿದೆ.

'ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದ (ಗುಜರಾತ್ ಹೈಕೋರ್ಟ್‌ನಿಂದ) ಅಪರಾಧಿಗಳಿಗೆ ಮರಣದಂಡನೆಯನ್ನೇ ನೀಡುವಂತೆ ನಾವು ಗಂಭೀರವಾಗಿ ಒತ್ತಾಯಿಸುತ್ತೇವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 59 ಜನರನ್ನು ಜೀವಂತವಾಗಿ ಸುಟ್ಟುಹಾಕಿದ ಅಪರೂಪದ ಪ್ರಕರಣ ಇದಾಗಿದೆ ಗುಜರಾತ್ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು.

'ರೈಲಿಗೆ ಬೆಂಕಿ ಹೊತ್ತಿಸುವ ಮುನ್ನ ಬೋಗಿಯನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು ಎಂಬುದು ಎಲ್ಲೆಡೆ ದೃಢಪಟ್ಟಿದೆ. ಘಟನೆಯಲ್ಲಿ ಹೆಂಗಸರು ಮತ್ತು ಮಕ್ಕಳು ಸೇರಿದಂತೆ ಐವತ್ತೊಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಗುಜರಾತ್ ರೈಲು ಹತ್ಯಾಕಾಂಡದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದ 31 ಜನರ ಪೈಕಿ 11 ಮಂದಿಗೆ ಮರಣದಂಡನೆ ಮತ್ತು ಇತರ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಒಟ್ಟು 31 ಮಂದಿಯನ್ನು ತಪ್ಪಿತಸ್ಥರೆಂದು ಹೈಕೋರ್ಟ್ ಎತ್ತಿಹಿಡಿದಿದೆ ಮತ್ತು 11 ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿಗೆ ಪರಿವರ್ತಿಸಿದೆ ಎಂದು ಮೆಹ್ತಾ ಹೇಳಿದರು.

2002ರ ಫೆಬ್ರುವರಿ 27 ರಂದು, ಗುಜರಾತ್‌ನ ಗೋದ್ರಾದಲ್ಲಿ ರೈಲಿನ S-6 ಕೋಚ್ ಅನ್ನು ಸುಟ್ಟುಹಾಕಿದಾಗ 59 ಜನರು ಮೃತಪಟ್ಟಿದ್ದರು. ಇದು ರಾಜ್ಯದಲ್ಲಿ ಗಲಭೆಗೆ ಕಾರಣವಾಯಿತು.

11 ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವುದರ ವಿರುದ್ಧ ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಿದೆ ಎಂದು ಮೆಹ್ತಾ ಹೇಳಿದರು.

ಈ ಪ್ರಕರಣದಲ್ಲಿ ಹಲವು ಆರೋಪಿಗಳು ತಮ್ಮ ಶಿಕ್ಷೆಯನ್ನು ಎತ್ತಿಹಿಡಿದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಈವರೆಗೆ ಜಾಮೀನು ನೀಡಿದೆ. ಈ ಪ್ರಕರಣದಲ್ಲಿ ಇನ್ನೂ ಏಳು ಜಾಮೀನು ಅರ್ಜಿಗಳು ತೀರ್ಪಿಗೆ ಬಾಕಿ ಇವೆ.

ಪ್ರಕರಣದಲ್ಲಿ ತನ್ನ ಮುಂದೆ ಹೆಚ್ಚಿನ ಸಂಖ್ಯೆಯ ಜಾಮೀನು ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಪೀಠವು ಗಮನಿಸಿದೆ. ಅರ್ಜಿದಾರರ ಪರವಾಗಿ ಗುಜರಾತ್‌ನ ಸ್ಥಾಯಿ ವಕೀಲರಾದ ವಕೀಲ ಸ್ವಾತಿ ಘಿಲ್ಡಿಯಾಲ್ ಅವರೊಂದಿಗೆ ಎಒಆರ್‌ಗಳು (ಅಡ್ವೊಕೇಟ್-ಆನ್ ರೆಕಾರ್ಡ್ಸ್) ಅರೋಪಿಗಳ ಪರ ವಾದ ಮಂಡಿಸಲು ಒಪ್ಪಿಕೊಳ್ಳಲಾಗಿದೆ. ಲ್ಲಾ ಸಂಬಂಧಿತ ವಿವರಗಳೊಂದಿಗೆ ಸಮಗ್ರ ಚಾರ್ಟ್ ಅನ್ನು ಸಿದ್ಧಪಡಿಸಬೇಕು ಎಂದು ಸುಪ್ರೀಂ ಹೇಳಿದೆ.

ಮೂರು ವಾರಗಳ ನಂತರ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೆಲವು ಅಪರಾಧಿಗಳ ಜಾಮೀನು ಅರ್ಜಿಗಳ ಸಲ್ಲಿಕೆ ಕುರಿತು ಜನವರಿ 30 ರಂದು ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿತು.

ಅಬ್ದುಲ್ ರಹೆಮಾನ್ ಧಂಟಿಯಾ ಅಲಿಯಾಸ್ ಕಂಕಟ್ಟೋ, ಅಬ್ದುಲ್ ಸತ್ತಾರ್ ಇಬ್ರಾಹಿಂ ಗಡ್ಡಿ ಅಸ್ಲಾ ಮತ್ತು ಇತರರ ಜಾಮೀನು ಅರ್ಜಿಗಳ ಕುರಿತು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com