ಛತ್ತೀಸ್‌ಗಢದಲ್ಲಿ ಟ್ರಕ್- ವ್ಯಾನ್ ನಡುವೆ ಭೀಕರ ಅಪಘಾತ: ನಾಲ್ಕು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 11 ಮಂದಿ ಸ್ಥಳದಲ್ಲೇ ಸಾವು

ಬಲೋಡಾ ಬಜಾರ್ - ಭಟಪರಾ ಜಿಲ್ಲೆಯ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಟ್ರಕ್‌ ಹಾಗೂ ವ್ಯಾನ್‌ ನಡುವೆ ಡಿಕ್ಕಿ ಸಂಭವಿಸಿದ್ದು, 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್‌ಪುರ: ಬಲೋಡಾ ಬಜಾರ್ - ಭಟಪರಾ ಜಿಲ್ಲೆಯ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ಟ್ರಕ್‌ ಹಾಗೂ ವ್ಯಾನ್‌ ನಡುವೆ ಡಿಕ್ಕಿ ಸಂಭವಿಸಿದ್ದು, 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಯಾಣಿಕರೆಲ್ಲರೂ ಸಂಬಂಧಿಕರಾಗಿದ್ದು, ಗುರುವಾರ ತಡರಾತ್ರಿ ಕೌಟುಂಬಿಕ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ

ರಸ್ತೆ ಅಪಘಾತದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭಟಪಾರಾ ಆಸ್ಪತ್ರೆ ಮತ್ತು ಬಲೋಡಾ ಬಜಾರ್‌ಗೆ ದಾಖಲಿಸಲಾಗಿದೆ. ತಡರಾತ್ರಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಭಟಪಾರಾ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಮೃತ ಪಟ್ಟವರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ಎಸ್‌ಐ ಸಂಜೀವ್ ಸಿಂಗ್ ರಜಪೂತ್ ತಿಳಿಸಿದ್ದಾರೆ.

ಪಿಕಪ್‌ ವಾಹನದಲ್ಲಿದ್ದ ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಖಿಲೋರಾ ಗ್ರಾಮದಿಂದ ಅರ್ಜುನಿ ಗ್ರಾಮಕ್ಕೆ ತೆರಳಿದ್ದರು. ಅಪಘಾತದ ಬಗ್ಗೆ ಮಾಹಿತಿ ಪಡೆದ ಭಟಪಾರ ಪೊಲೀಸರು ತಡರಾತ್ರಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕಾರ್ಯಕ್ರಮ ಮುಗಿಸಿ ಸಂಬಂಧಿಕರು ಪಿಕಪ್‌ ವಾಹನದಲ್ಲಿ ಅರ್ಜುನಿಯಿಂದ ತಮ್ಮ ಗ್ರಾಮ ಖಿಲೋರಾಗೆ ಹಿಂತಿರುಗುತ್ತಿದ್ದರು. ಈ ಮಧ್ಯೆ, ರಾತ್ರಿ 12 ಗಂಟೆ ಸುಮಾರಿಗೆ ಖಮಾರಿಯಾದ ಡಿಪಿಡಬ್ಲ್ಯುಎಸ್ ಶಾಲೆಯ ಬಳಿ ವೇಗವಾಗಿ ಬಂದ ಟ್ರಕ್‌ ಮತ್ತು ಪಿಕಪ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನ ಉರುಳಿ ಬಿದ್ದಿತ್ತು. ಅಪಘಾತದಲ್ಲಿ 4 ಮಕ್ಕಳು ಸೇರಿದಂತೆ 11 ಮಂದಿ ದಾರುಣ ಸಾವಾಗಿದೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಿಲ್ಲಾಸ್ಪತ್ರೆ ಹಾಗೂ ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮೂವರು ಗಾಯಾಳುಗಳನ್ನು ರಾಯ್‌ಪುರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com