ನಿತೀಶ್ ಕುಮಾರ್ ಗೆ ಬಿಜೆಪಿ ಬಾಗಿಲು ಶಾಶ್ವತವಾಗಿ ಮುಚ್ಚಿದೆ: ಅಮಿತ್ ಶಾ ಹೇಳಿಕೆ ವಿರುದ್ಧ ಜೆಡಿಯು ಕಿಡಿ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಬಿಜೆಪಿ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ ನಂತರ, ಜೆಡಿಯು ಪಕ್ಷದ ಮುಖ್ಯಸ್ಥ ಮರುಹೊಂದಾಣಿಕೆಗಾಗಿ ಬಿಜೆಪಿ ಪಕ್ಷವನ್ನು ಬೇಡಿಕೊಂಡಿದ್ದಾರೆಯೇ ಎಂದು ಜೆಡಿಯು ಹಿರಿಯ ನಾಯಕ ರಾಜೀವ್ ರಂಜನ್ ಸಿಂಗ್ ಭಾನುವಾರ ಪ್ರಶ್ನಿಸಿದ್ದಾರೆ.
ಸಿಎಂ ನಿತೀಶ್ ಕುಮಾರ್
ಸಿಎಂ ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಬಿಜೆಪಿ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ ನಂತರ, ಜೆಡಿಯು ಪಕ್ಷದ ಮುಖ್ಯಸ್ಥ ಮರುಹೊಂದಾಣಿಕೆಗಾಗಿ ಬಿಜೆಪಿ ಪಕ್ಷವನ್ನು ಬೇಡಿಕೊಂಡಿದ್ದಾರೆಯೇ ಎಂದು ಜೆಡಿಯು ಹಿರಿಯ ನಾಯಕ ರಾಜೀವ್ ರಂಜನ್ ಸಿಂಗ್ ಭಾನುವಾರ ಪ್ರಶ್ನಿಸಿದ್ದಾರೆ.

ಶನಿವಾರ ಬಿಹಾರ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ. ಬಿಜೆಪಿ ತೊರೆದು ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿರುವ ನಿತೀಶ್ ಕುಮಾರ್ ಅವರಿಗೆ  ಕೇಸರಿ ಪಕ್ಷದ ಬಾಗಿಲು ಶಾಶ್ವತವಾಗಿ ಮುಚ್ಚಲ್ಪಟ್ಟಿದೆ ಎಂದು ಹೇಳಿದ್ದರು.

ಈ ಹೇಳಿಕೆ ಕುರಿತು ಕಿಡಿಕಾರಿದ ರಾಜೀವ್ ರಂಜನ್ ಸಿಂಗ್,  ನಿತೀಶ್ ಕುಮಾರ್ ಮರು ಹೊಂದಾಣಿಕೆಗಾಗಿ ಬಿಜೆಪಿ ಮೊರೆ ಹೋಗಿದ್ದಾರೆಯೇ? ಎಂದು ಪ್ರಶ್ನಿಸಿದರು.  2017 ರಲ್ಲಿ ಪ್ರಧಾನಿ ಮೋದಿ ಮನವೊಲಿಸಿದ ನಂತರವೇ ನಿತೀಶ್ ಕುಮಾರ್  ಎನ್‌ಡಿಎಗೆ ಮರಳಿದರು ಎಂಬುದನ್ನು ಅಮಿತ್ ಶಾ ನೆನಪಿಸಿಕೊಳ್ಳಬೇಕು ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಸಿಂಗ್ ಹೇಳಿದ್ದಾರೆ.

ಅಮಿತ್ ಶಾ ಹೇಳಿದ್ದನ್ನೇ ಪದೇ ಪದೇ ಹೇಳುತ್ತಿರುವುದು ಆಶ್ಚರ್ಯಕರವಾಗಿದೆ ಎಂದಿರುವ ಮತ್ತೋರ್ವ ಜೆಡಿಯು ನಾಯಕ ವಿಜಯ್ ಕುಮಾರ್ ಚೌಧರಿ, ಬಿಜೆಪಿಯು ನಿತೀಶ್ ಕುಮಾರ್ ಮತ್ತು ಜೆಡಿಯು ತಮ್ಮ ಪಕ್ಕದಲ್ಲಿಲ್ಲದ ಬಿಸಿಯನ್ನು ಅನುಭವಿಸಲು ಪ್ರಾರಂಭಿಸಿದೆಯೇ ಎಂದು ಪ್ರಶ್ನಿಸಿದರು. ನಿತೀಶ್  ಕುಮಾರ್ ಎನ್‌ಡಿಎಗೆ ಮರಳುವ ಉದ್ದೇಶವನ್ನು ಎಂದಿಗೂ ವ್ಯಕ್ತಪಡಿಸಿಲ್ಲ, ಆದ್ದರಿಂದ ಶಾ ಅವರ ಹೇಳಿಕೆ ಅರ್ಥಹೀನವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com