ಲೈಂಗಿಕ ಕಿರುಕುಳ ಆರೋಪ; ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಪ್ರಕರಣ ದಾಖಲು
ಚಂಡೀಗಢ: ಮಹಿಳಾ ತರಬೇತುದಾರರ ದೂರಿನ ಮೇರೆಗೆ ಚಂಡೀಗಢ ಪೊಲೀಸರು ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅಕ್ರಮ ಬಂಧನದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಭಾರತೀಯ ಹಾಕಿ ತಂಡದ ಮಾಜಿ ನಾಯಕರೂ ಆಗಿರುವ ಬಿಜೆಪಿ ನಾಯಕನ ವಿರುದ್ಧ ಶನಿವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಸ್ಥಳೀಯ ಮಹಿಳಾ ಕೋಚ್ ನೀಡಿದ ದೂರಿನ ಮೇರೆಗೆ, ಹರಿಯಾಣದ ಕ್ರೀಡಾ ಸಚಿವರ ವಿರುದ್ಧ 2022ರ ಡಿಸೆಂಬರ್ 31ರಂದು ರಂದು ಐಪಿಸಿ ಸೆಕ್ಷನ್ 354, 354A, 354B, 342, 506 ರ ಅಡಿಯಲ್ಲಿ ಎಫ್‌ಐಆರ್ ಅನ್ನು ಚಂಡೀಗಢದ ಪೊಲೀಸ್ ಠಾಣೆ ಸೆಕ್ಟರ್ 26 ರಲ್ಲಿ ದಾಖಲಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ರಾಜ್ಯದ ಜೂನಿಯರ್ ಅಥ್ಲೆಟಿಕ್ಸ್ ತರಬೇತುದಾರರೊಬ್ಬರು ಗುರುವಾರ ಸಚಿವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ ಮತ್ತು ಒಂದು ದಿನದ ನಂತರ ಪೊಲೀಸ್ ದೂರು ದಾಖಲಿಸಿದ್ದಾರೆ.
ಕೆಲವು ಅಧಿಕೃತ ಕೆಲಸದ ನಿಮಿತ್ತ ಸಂದೀಪ್ ಸಿಂಗ್ ಅವರನ್ನು ಭೇಟಿಯಾಗಲು ಚಂಡೀಗಢದಲ್ಲಿರುವ ಅವರ ನಿವಾಸ ಹಾಗೂ ಕ್ಯಾಂಪ್ ಆಫೀಸ್‌ಗೆ ಹೋಗಿದ್ದಾಗ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಆದರೆ, ಸಚಿವರು ಈ ಆರೋಪವನ್ನು ನಿರಾಧಾರ ಎಂದು ತಳ್ಳಿಹಾಕಿದ್ದಾರೆ ಮತ್ತು ಸ್ವತಂತ್ರ ತನಿಖೆಗೆ ಕರೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ