ಇಂದೋರ್(ಮಧ್ಯಪ್ರದೇಶ): ನಟರು ಜಿಮ್ ಮಾಡಿ ತಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುವಂತೆ ಯುವಕರು ಸಹ ಜಿಮ್ ಮೇಲಿನ ವ್ಯಾಮೋಹ ಜಾಸ್ತಿಯಾಗುತ್ತಿದೆ. ಆದರೆ ಇತ್ತೀಚೆಗೆ ಜಿಮ್ ಮಾಡುವಾಗಲೇ ಕುಸಿದುಬಿದ್ದು ಹಲವು ಪ್ರಾಣಕಳೆದುಕೊಂಡಿರುವ ಘಟನೆಗಳು ವರದಿಯಾಗುತ್ತಿವೆ.
ಲಾಸುಡಿಯಾ ಪ್ರದೇಶದ ಗೋಲ್ಡನ್ ಜಿಮ್‌ನಲ್ಲಿ ತಮ್ಮ ದೈನಂದಿನ ವ್ಯಾಯಾಮವನ್ನು ಮಾಡುತ್ತಿದ್ದ ಖ್ಯಾತ ಹೋಟೆಲ್ ಮಾಲೀಕ ಪ್ರದೀಪ್ ರಘುವಂಶಿ ಈ ವೇಳೆ ಏಕಾಏಕಿ ಕುಸಿದುಬಂದಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸಮೀಪದ ಭಂಡಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಇಂದೋರ್‌ನ ಜಿಮ್‌ನ ವೀಡಿಯೊ ವೈರಲ್ ಆಗಿದೆ. ಇದರಲ್ಲಿ ಹೋಟೆಲ್ ನಿರ್ವಾಹಕರೊಬ್ಬರು ಜಿಮ್‌ನಲ್ಲಿ ವ್ಯಾಯಾಮ ಮಾಡುವುದನ್ನು ಕಾಣಬಹುದು. ಈ ವೇಳೆ ತಲೆಸುತ್ತು ಬಂದು ನೆಲದ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ವೈದ್ಯರ ಪ್ರಕಾರ, ಪ್ರದೀಪ್ ಹೃದಯಾಘಾತಕ್ಕೆ ಒಳಗಾಗಿದ್ದರು, ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಮೃತ ಪ್ರದೀಪ್ ರಘುವಂಶಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜವರ್ಗಿಯ ಅವರಿಗೆ ಆಪ್ತರು ಎನ್ನಲಾಗಿದೆ. ಇಂದೋರ್‌ನ ಲಾಸುಡಿಯಾ ಪ್ರದೇಶದ ಗೋಲ್ಡನ್ ಜಿಮ್‌ನಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸ್ಕೀಮ್ ನಂಬರ್ 78ರಲ್ಲಿ ನೆಲೆಸಿರುವ ಇಂದೋರ್‌ನ ಹೆಸರಾಂತ ಹೋಟೆಲ್ ಮಾಲೀಕ ಪ್ರದೀಪ್ ಅವರು ದಿನನಿತ್ಯದಂತೆ ವರ್ಕೌಟ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ವ್ಯಾಯಾಮಕ್ಕೂ ಮುನ್ನ ವೈದ್ಯಕೀಯ ತಪಾಸಣೆ ಅಗತ್ಯ ಎಂದು ಭಂಡಾರಿ ಆಸ್ಪತ್ರೆಯ ಡಾ.ಹರೀಶ್ ಸೋನಿ ಹೇಳಿದ್ದಾರೆ. ವಯಸ್ಸಾದ ವ್ಯಕ್ತಿಯು ವ್ಯಾಯಾಮದ ಮೊದಲು ವೈದ್ಯರ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಜಿಮ್‌ಗೆ ಹೋಗಲು ಪ್ರಾರಂಭಿಸಿದ್ದಾರೆ. ಅಲ್ಲಿ ಫಿಟ್‌ನೆಸ್‌ಗಾಗಿ ವರ್ಕ್ ಔಟ್ ಮಾಡಿದ ನಂತರ ಸಮಸ್ಯೆ ಉಂಟಾಗುತ್ತದೆ. ವೈದ್ಯರ ಸಲಹೆಯಿಲ್ಲದೆ ಯಾವುದೇ ಪ್ರೋಟೀನ್ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.
ಪ್ರದೀಪ್ ನಮ್ಮ ಹಳೆಯ ಕ್ಲೈಂಟ್ ಎಂದು ಜಿಮ್ ಟ್ರೈನರ್ ಹೇಳಿದ್ದಾರೆ. ಪ್ರತಿನಿತ್ಯ ಜಿಮ್‌ಗೆ ಬರುತ್ತಿದ್ದರು. ಇಂದು ಹಠಾತ್ ಹೃದಯಾಘಾತದಿಂದ ಕೇವಲ 3 ನಿಮಿಷದಲ್ಲಿ ಎಲ್ಲವೂ ಮುಗಿದು ಹೋಯಿತು. ಜಿಮ್ ಮಾಡುವ ಮೊದಲು ನಮ್ಮ ಸಾಮರ್ಥ್ಯ ಏನೆಂದು ನೋಡಿ ಎಂದರು. ಇತರರನ್ನು ನೋಡಿದ ನಂತರ ಜಿಮ್ ಮಾಡಬೇಡಿ, ಇಲ್ಲದಿದ್ದರೆ ನೀವು ಅಪಘಾತಕ್ಕೆ ಬಲಿಯಾಗಬಹುದು ಎಂದು ಹೇಳಿದ್ದಾರೆ.
Advertisement