ಕಾಂಗ್ರೆಸ್ 70 ವರ್ಷಗಳ ಕಾಲ ಸಂವಿಧಾನ ರಕ್ಷಿಸಿದೆ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ 70 ವರ್ಷಗಳ ಕಾಲ ದೇಶದ ಸಂವಿಧಾನವನ್ನು ರಕ್ಷಿಸಿದೆ ಎಂದು ಹೇಳಿದೆ.
ಬಿಹಾರದ ಬಾಂಕಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತಾ ಪ್ರಧಾನಿ ಮೋದಿ ಯಾವಾಗಲೂ ಕೇಳುತ್ತಿರುತ್ತಾರೆ. ಕಾಂಗ್ರೆಸ್ ಸಂವಿಧಾನವನ್ನು ರಕ್ಷಿಸಿದೆ. ಆದ್ದರಿಂದಲೇ ನಿಮ್ಮಂತಹವರು ಪ್ರಧಾನಿಯಾಗಲು ಮತ್ತು ನನ್ನಂತಹ ಬಡ ವ್ಯಕ್ತಿಯ ಮಗ ಎಐಸಿಸಿ ಅಧ್ಯಕ್ಷರಾಗಲು ಸಾಧ್ಯವಾಯಿತು ಎಂದು ಮೋದಿಗೆ ಹೇಳಲು ಬಯಸುತ್ತೇನೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಕೊಡುಗೆ ಕುರಿತು ಮಾತನಾಡಿದ ಖರ್ಗೆ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಯಾವುದೇ ಕೊಡುಗೆ ನೀಡಿಲ್ಲ, ಆ ಪಕ್ಷದ ಯಾವುದೇ ಕಾರ್ಯಕರ್ತರು ಜೈಲಿಗೆ ಹೋಗಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಮೂಲಕ ಅದರ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದೆ. ಆದರೆ, ಬಿಜೆಪಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ