ವಂಚನೆ ಪ್ರಕರಣ: ಚಂದಾ ಕೊಚ್ಚರ್, ಪತಿ ದೀಪಕ್ ಕೊಚ್ಚರ್ ಜೈಲಿನಿಂದ ಬಿಡುಗಡೆ
ಮುಂಬೈ: ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಒಂದು ದಿನದ ನಂತರ, ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಮಂಗಳವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆಗೊಂಡಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಚಂದಾ ಕೊಚ್ಚರ್ ಮುಂಬೈನ ಬೈಕುಲ್ಲಾ ಮಹಿಳಾ ಜೈಲಿನಿಂದ ಬಿಡುಗಡೆಗೊಂಡಿದ್ದರೆ, ಅವರ ಪತಿ ದೀಪಕ್ ಕೊಚ್ಚರ್ ಅವರು ಆರ್ಥರ್ ರೋಡ್ನಲ್ಲಿರುವ ಜೈಲಿನಿಂದ ಬಿಡುಗಡೆಗೊಂಡಿದ್ದಾರೆಂದು ತಿಳಿಸಿದ್ದಾರೆ.
ವಿಡಿಯೋಕಾನ್-ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಡಿಸೆಂಬರ್ 23, 2022 ರಂದು ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಬಂಧನಕ್ಕೊಳಪಡಿಸಿತ್ತು.
ತಮ್ಮ ಬಂಧನವನ್ನು ಪ್ರಶ್ನಿಸಿ ದಂಪತಿಗಳು ಬಾಂಬೆ ಹೈಕೋರ್ಟ್‌ನಲ್ಲಿ ಮೆಟ್ಟಿಲೇರಿದ್ದರು. ಈ ಸಂಬಂಧ ನಿನ್ನೆ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಅವರ ಬಂಧನ ಕಾನೂನಿನ ಪ್ರಕಾರವಾಗಿಲ್ಲ. ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 41ಎ ಅನ್ನು ಉಲ್ಲಂಘಿಸಲಾಗಿದೆ. ಸಂಬಂಧ ಪಟ್ಟ ವ್ಯಕ್ತಿಗೆ ಮೊದಲು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಹೇಳಬೇಕು ಎಂದು ಹೇಳಿತ್ತು. ಅಲ್ಲದೆ, ಇಬ್ಬರನ್ನು ಬಿಡುಗಡೆ ಮಾಡುವಂತೆಯೂ ಆದೇಶಿಸಿತ್ತು.
ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಚಂದಾ ಕೊಚ್ಚರ್, ಅವರ ಪತಿ ದೀಪಕ್ ಕೊಚ್ಚರ್ ಮತ್ತು ವಿಡಿಯೊಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್, ನ್ಯೂಪವರ್ ರಿನ್ಯೂವಬಲ್ಸ್, ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.
ವಿಡಿಯೊಕಾನ್ ಗ್ರೂಪ್, ಐಸಿಐಸಿಐ ಬ್ಯಾಂಕ್‌ನಿಂದ ರೂ.3,250 ಕೋಟಿ ಸಾಲ ಪಡೆದ ಕೆಲ ತಿಂಗಳ ನಂತರ ವಿಡಿಯೊಕಾನ್ ಪ್ರವರ್ತಕ ವೇಣುಗೋಪಾಲ್, ನ್ಯೂಪವರ್‌ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು.
ಆರೋಪಿಯು(ಚಂದಾ ಕೊಚ್ಚರ್) ಐಸಿಐಸಿಐ ಬ್ಯಾಂಕ್‌ಗೆ ವಂಚನೆ ಮಾಡುವ ದೃಷ್ಟಿಯಿಂದ ಇತರರ ಜೊತೆ ಸೇರಿಕೊಂಡು ಖಾಸಗಿ ಕಂಪನಿಗೆ ಸಾಲವನ್ನು ಮಂಜೂರು ಮಾಡಿದ್ದಾರೆ ಎಂಬುದು ಸಿಬಿಐ ಆರೋಪವಾಗಿದೆ. ಪ್ರಕರಣ ಕುರಿತಂತೆ 2019ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ