ಶೀತಗಾಳಿಗೆ ದೆಹಲಿ ತತ್ತರ: ತಾಪಮಾನ 1.4 ಡಿಗ್ರಿಗೆ ಕುಸಿತ, ಹಾಲಿ ಋತುವಿನ ಕನಿಷ್ಠ ದಾಖಲೆ

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ, ವಾಯವ್ಯ ಭಾರತದ ಬಯಲುಪ್ರದೇಶಗಳಲ್ಲಿ ಶೀತಗಾಳಿ ಹೆಚ್ಚಾಗಿದ್ದು, ದೆಹಲಿಯಲ್ಲಿ ಹಾಲಿ ಋತುವಿನ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶೀತ ಗಾಳಿ
ಶೀತ ಗಾಳಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ, ವಾಯವ್ಯ ಭಾರತದ ಬಯಲುಪ್ರದೇಶಗಳಲ್ಲಿ ಶೀತಗಾಳಿ ಹೆಚ್ಚಾಗಿದ್ದು, ದೆಹಲಿಯಲ್ಲಿ ಹಾಲಿ ಋತುವಿನ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದೆಹಲಿಯಲ್ಲಿ ದಟ್ಟ ಮಂಜು ಕವಿದಿರುವ ವಾತಾವರಣ ಇದೆ. ಸೋಮವಾರ ಬೆಳಗ್ಗೆ ದೆಹಲಿಯ ಆಯಾನಗರ, ಲೋಧಿ ರಸ್ತೆ, ಸಫ್ದರ್‌ಜಂಗ್‌, ಜಾಫರ್‌ಪುರದಲ್ಲಿ ಕನಿಷ್ಠ 4.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ ಎಂದು ಇಲಾಖೆಯ ಪ್ರಾದೇಶಿಕ ಮುನ್ಸೂಚನೆ ಕೇಂದ್ರದ ಅಧಿಕಾರಿ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕೇವಲ ಎರಡು ದಿನಗಳಲ್ಲಿ ಕನಿಷ್ಠ ತಾಪಮಾನವು ಸುಮಾರು ಒಂಬತ್ತು ಡಿಗ್ರಿಗಳಷ್ಟು ಕಡಿಮೆಯಾಗಿದ್ದು, ನಿನ್ನೆ 4.7 ಡಿಗ್ರಿ ಸೆಲ್ಸಿಯಸ್ ಮತ್ತು ಭಾನುವಾರ 10.2 ಡಿಗ್ರಿ ಸೆಲ್ಸಿಯಸ್ ಇತ್ತು. ಜನವರಿ 8 ರಂದು, ನಗರದಲ್ಲಿ ಕನಿಷ್ಠ ತಾಪಮಾನ 1.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು, ಇದು ಇಂದು ಋತುವಿನ ಅತ್ಯಂತ ಕಡಿಮೆ ತಾಪಮಾನವಾಗಿತ್ತು. ಆದರೆ ಇಂದು ಮುಂಜಾನೆ ತಾಪಮಾನವು 1.4ಡಿಗ್ರಿಗೆ  ಕುಸಿತ ಕಾಣುವ ಮೂಲಕ ಋತುವಿನ ಅತ್ಯಂತ ಕಡಿಮೆ ತಾಪಮಾನವಾಗಿ ದಾಖಲಾಗಿದೆ.

ಪಂಜಾಬ್, ಹರಿಯಾಣ ದೆಹಲಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಉತ್ತರಪ್ರದೇಶದ ಗೋರಖ್‌ಪುರ ಮತ್ತು ಮೀರತ್‌ನಲ್ಲೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.  ಬೆಳಗ್ಗೆಯಿಂದ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ದೆಹಲಿಯ ಹಲವು ಭಾಗಗಳಲ್ಲಿ ತೀವ್ರ ಶೀತಗಾಳಿ ಬೀಸುತ್ತಿದೆ. ಇದು ಜನವರಿ 18ರವರೆಗೂ ಮುಂದುವರೆಯಲಿದ್ದು ಕನಿಷ್ಠ ತಾಪಮಾನವು ಸುಮಾರು 2 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 

ಹಿಮಾಲಯ ಪರ್ವತದ ಪಶ್ಚಿಮ ಭಾಗದಿಂದ ಶೀತ ಮಾರುತಗಳು ಬೀಸುತ್ತಿರುವ ಕಾರಣ ತಾಪಮಾನ ಕಡಿಮೆಯಾಗಲಿದ್ದು, ಸಮತಟ್ಟು ಪ್ರದೇಶಗಳಲ್ಲಿ ಇನ್ನು ಮೂರು ದಿನಗಳು ಈ ಶೀತ ಗಾಳಿ ಬೀಸಲಿದೆ. ಭಾನುವಾರ ವಾಯವ್ಯ ಮತ್ತು ಆಗ್ನೇಯ ರಾಜಸ್ಥಾನದಲ್ಲಿ ಕನಿಷ್ಠ ತಾಪಮಾನ 1ರಿಂದ 3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇಲ್ಲಿನ ಥಾರ್ ಮರುಭೂಮಿ ಸಮೀಪದ ಚುರು ಪ್ರದೇಶದಲ್ಲಿ ಮೈನಸ್ 2.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನವಿತ್ತು. ಪಂಜಾಬ್, ಹರಿಯಾಣ, ದೆಹಲಿ, ಉತ್ತರಪ್ರದೇಶದ ನೈರುತ್ಯ ಭಾಗಗಳಲ್ಲಿ ಕನಿಷ್ಠ ತಾಪಮಾನ 3ರಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಇತ್ತು.  ಹರಿಯಾಣದಲ್ಲಿ, ಹಿಸಾರ್‌ನಲ್ಲಿ ಕನಿಷ್ಠ ತಾಪಮಾನ 0.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಪಂಜಾಬ್‌ನ ಅಮೃತಸರದಲ್ಲಿ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ ಎಂದು ಐಎಂಡಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com