ಹರ್ಯಾಣ: ಪೊಲೀಸ್ ವಾಹನ ಡಿಕ್ಕಿ ಹೊಡೆದು 6 ವರ್ಷದ ಬಾಲಕಿ ಸಾವು, ವಾಹನ ಬಿಟ್ಟು ಪರಾರಿಯಾದ ಆ'ರಕ್ಷಕರು'!

ಗುರುಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪೊಲೀಸ್ ವಾಹನವೊಂದು ಕಾರಿಗೆ ಢಿಕ್ಕಿಯಾದ ಪರಿಣಾಮ 6 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಚ್ಚರಿ ಎಂದರೆ ಆಕೆಯನ್ನು ರಕ್ಷಿಸಬೇಕಾದ ಪೊಲೀಸರು ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಗುರುಗ್ರಾಮ ಅಪಘಾತ
ಗುರುಗ್ರಾಮ ಅಪಘಾತ

ಹರ್ಯಾಣ​: ಗುರುಗ್ರಾಮದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪೊಲೀಸ್ ವಾಹನವೊಂದು ಕಾರಿಗೆ ಢಿಕ್ಕಿಯಾದ ಪರಿಣಾಮ 6 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಚ್ಚರಿ ಎಂದರೆ ಆಕೆಯನ್ನು ರಕ್ಷಿಸಬೇಕಾದ ಪೊಲೀಸರು ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ಗುರುಗ್ರಾಮ್-ಫರಿದಾಬಾದ್ ರಸ್ತೆಯಲ್ಲಿ ವೇಗವಾಗಿ ಬಂದ ಹರ್ಯಾಣ ಪೊಲೀಸರ ತುರ್ತು ಪ್ರತಿಕ್ರಿಯೆ ವಾಹನ (ಇಆರ್‌ವಿ) ಕಾರಿಗೆ ಡಿಕ್ಕಿ ಹೊಡೆದು 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಮತ್ತೆ ಐವರು ಗಾಯಗೊಂಡಿದ್ದು, ಘಟನೆ ಬಳಿಕ ವಾಹನದಲ್ಲಿದ್ದ ಪೊಲೀಸರು ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. 

ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದ ಈ ಅಪಘಾತದಲ್ಲಿ ಆರು ವರ್ಷದ ಮಗು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐವರು, ಇಬ್ಬರು ಮಹಿಳೆಯರು ಹಾಗೂ ಕಾರು ಚಾಲಕ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಗ್ವಾಲ್ ಪಹಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತುರ್ತು ಪ್ರತಿಕ್ರಿಯೆ ವಾಹನವು ರಾಂಗ್ ಸೈಡ್‌ನಲ್ಲಿ ಚಲಿಸುತ್ತಿತ್ತು. ಈ ವೇಳೆ ಪೊಲೀಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಢಿಕ್ಕಿಯಾಗಿದೆ. ಈ ವೇಳೆ ಕಾರಿನಲ್ಲಿದ್ದವರ ಪೈಕಿ 6 ವರ್ಷದ ಬಾಲಕಿ ಸಾವನ್ನಪ್ಪಿ, ಐದು ಮಂದಿ ಗಾಯಗೊಂಡಿದ್ದಾರೆ. ಬಳಿಕ ಅಪಘಾತದಲ್ಲಿ ಭಾಗಿಯಾದ ಪೊಲೀಸರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಗಾಯಗೊಂಡವರಲ್ಲಿ ಒಬ್ಬನ ಪತಿ ವಿಶ್ವಜೀತ್ ಸುದ್ದಿಸಂಸ್ಥೆಗೆ ಅಪಘಾತದ ಕುರಿತು ಮಾಹಿತಿ ನೀಡಿದ್ದು, ತನ್ನ ಪತ್ನಿ, ಅತ್ತೆ ಮತ್ತು ಸೋದರ ಮಾವ, ಮೂವರು ಮಕ್ಕಳೊಂದಿಗೆ ದೆಹಲಿಯಿಂದ ಫರಿದಾಬಾದ್‌ಗೆ ಕಾರಿನಲ್ಲಿ ತೆರಳುತ್ತಿದ್ದೆವು. ಈ ವೇಳೆ ಪೊಲೀಸ್ ವಾಹನ ತಮ್ಮ ಕಾರಿಗೆ ಢಿಕ್ಕಿಯಾಗಿದ್ದು, ಅಪಘಾತದ ಸ್ಥಳದಿಂದ ಪರಾರಿಯಾಗುವ ಬದಲು ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದಿದ್ದರೆ ಇಂದು ನನ್ನ ಮಗಳು ಬದುಕಿರುತ್ತಿದ್ದಳು ಎಂದು ವಿಶ್ವಜೀತ್ ಹೇಳಿದ್ದಾರೆ.

ಪೊಲೀಸರು ಅಪಘಾತ ಸ್ಥಳದಿಂದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279, 337, 427, 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಪೊಲೀಸರ ವಿರುದ್ಧ ಇಲಾಖಾ ಕ್ರಮ
ಇನ್ನು ಈ ಘಟನೆ ಸುದ್ದಿಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಪೊಲೀಸರ ನಡೆ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ರಕ್ಷಿಸಬೇಕಾದ ಆರಕ್ಷಕರೇ ಬಾಲಕಿಯನ್ನು ಮತ್ತು ಸಂತ್ರಸ್ಥರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವುದು ಇಲಾಖೆಯ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಗುರುಗ್ರಾಮ ಪೊಲೀಸ್ ಇಲಾಖೆ, ಘಟನೆಯಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಾಲಕ, ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಮತ್ತು ಹೆಡ್ ಕಾನ್‌ಸ್ಟೆಬಲ್ ವಿರುದ್ಧ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದು ಎಂದು ಗುರುಗ್ರಾಮ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿಕಾಸ್ ಕೌಶಿಕ್ ಹೇಳಿದ್ದಾರೆ.

ಮೂವರ ಅಮಾನತು
ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು,. ಪಿಸಿಆರ್ ವ್ಯಾನ್ ಚಾಲಕ ಸೇರಿದಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com