ಕಾಶ್ಮೀರಿ ಪಂಡಿತರ ನಿಯೋಗದಿಂದ ರಾಹುಲ್ ಗಾಂಧಿ ಭೇಟಿ; ತಾವು ವಾಸಿಸುವ ಜಾಗ್ತಿ ನಗರಕ್ಕೆ ಭೇಟಿ ನೀಡುವಂತೆ ಮನವಿ

ಕಾಶ್ಮೀರಿ ಪಂಡಿತರ ನಿಯೋಗವು ಸೋಮವಾರ ಸಾಂಬಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿತು ಮತ್ತು ಭಯೋತ್ಪಾದಕರ 'ಉದ್ದೇಶಿತ ಹತ್ಯೆಗಳು' ಮತ್ತು ಪ್ರಧಾನ ಮಂತ್ರಿಯ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುವವರ ಪ್ರತಿಭಟನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅವರಿಗೆ ವಿವರಿಸಿದರು.
ತಮ್ಮ ಬೆಂಬಲಿಗರೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
ತಮ್ಮ ಬೆಂಬಲಿಗರೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
Updated on

ಜಮ್ಮು: ಕಾಶ್ಮೀರಿ ಪಂಡಿತರ ನಿಯೋಗವು ಸೋಮವಾರ ಸಾಂಬಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿತು ಮತ್ತು ಭಯೋತ್ಪಾದಕರ 'ಉದ್ದೇಶಿತ ಹತ್ಯೆಗಳು' ಮತ್ತು ಪ್ರಧಾನ ಮಂತ್ರಿಯ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುವವರ ಪ್ರತಿಭಟನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅವರಿಗೆ ವಿವರಿಸಿದರು.

ನಿಯೋಗದ ಭಾಗವಾಗಿದ್ದ ಸಾಮಾಜಿಕ ಕಾರ್ಯಕರ್ತ ಅಮಿತ್ ಕೌಲ್, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಇರುವ ತಮ್ಮ ಜಾಗ್ತಿ ನಗರಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಿದ್ದಾರೆ ಮತ್ತು ಅವರು ಕಾಶ್ಮೀರಕ್ಕೆ ಹೋಗುವ ಮಾರ್ಗದಲ್ಲಿ ಸಮುದಾಯವನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಹೇಳಿದರು.

ನಾವು ರಾಹುಲ್ ಗಾಂಧಿಯವರೊಂದಿಗೆ ಉತ್ತಮ ಸಂವಾದ ನಡೆಸಿದ್ದೇವೆ ಮತ್ತು ಸಮುದಾಯದ ಸಮಸ್ಯೆಗಳ ಬಗ್ಗೆ ಅವರಿಗೆ ವಿವರಿಸಿದ್ದೇವೆ. ವಿಶೇಷವಾಗಿ ಮನಮೋಹನ್ ಸಿಂಗ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರವು ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಉದ್ಯೋಗಗಳನ್ನು ಒದಗಿಸಿದ ಬಗ್ಗೆ ಮಾತನಾಡಿದ್ದೇವೆ. ಅವರು ಕಳೆದ ಆರು ತಿಂಗಳಿನಿಂದ ಜಮ್ಮುವಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಅವರ ಸಂಬಳವನ್ನು ತಡೆಹಿಡಿಯಲಾಗಿದೆ ಎಂದು ಕೌಲ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಸುಮಾರು 4,000 ಕಾಶ್ಮೀರಿ ವಲಸಿಗ ಪಂಡಿತರು 2008ರಲ್ಲಿ ಘೋಷಿಸಲಾದ ಪ್ರಧಾನ ಮಂತ್ರಿಯವರ ಉದ್ಯೋಗ ಪ್ಯಾಕೇಜ್ ಅಡಿಯಲ್ಲಿ ಆಯ್ಕೆಯಾದ ನಂತರ ಕಣಿವೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 

ಈ ಪ್ಯಾಕೇಜ್ ಎರಡು ಪ್ರಮುಖ ಅಂಶಗಳನ್ನು ಹೊಂದಿದೆ. ಅದೆಂದರೆ ಸಮುದಾಯದ ಯುವಕರಿಗೆ 6,000 ಉದ್ಯೋಗಗಳು ಮತ್ತು ನೇಮಕಗೊಂಡ ಉದ್ಯೋಗಿಗಳಿಗೆ ಅನೇಕ ವಸತಿ ಘಟಕಗಳನ್ನು ನಿರ್ಮಿಸುವುದಾಗಿದೆ.

ಆದರೆ, ತಮ್ಮ ಸಹೋದ್ಯೋಗಿಗಳಲ್ಲಿ ಒಬ್ಬರಾದ ರಾಹುಲ್ ಭಟ್ ಅವರನ್ನು ಕಳೆದ ವರ್ಷ ಮೇ 12 ರಂದು ಬುಡ್ಗಾಮ್ ಜಿಲ್ಲೆಯ ಅವರು ಕೆಲಸ ಮಾಡುತ್ತಿದ್ದ ಕಚೇರಿಯೊಳಗೆ ಭಯೋತ್ಪಾದಕರು ಗುಂಡಿಕ್ಕಿ ಕೊಂದ ನಂತರ ಅನೇಕ ಉದ್ಯೋಗಿಗಳು ಜಮ್ಮುವಿಗೆ ಓಡಿಹೋದರು. ಇದನ್ನು ಉದ್ದೇಶಿತ ಹತ್ಯೆ ಎನ್ನಲಾಗಿದೆ. ಹೀಗಾಗಿ, ಕಣಿವೆಯಿಂದ ತಮ್ಮನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ.

'ಪರಿಹಾರ ಹೆಚ್ಚಳದ ಅಗತ್ಯ ಸೇರಿದಂತೆ ಸಮುದಾಯದ ಇತರ ಸಮಸ್ಯೆಗಳನ್ನು ಸಹ ನಾವು ಎತ್ತಿದ್ದೇವೆ. ನಮ್ಮ ಜಾಗ್ತಿ ನಗರಕ್ಕೆ ಭೇಟಿ ನೀಡುವಂತೆ ಅಥವಾ ನಿಯೋಗವನ್ನು ಕಳುಹಿಸುವಂತೆ ನಾವು ಅವರನ್ನು ವಿನಂತಿಸಿದ್ದೇವೆ. ಆದರೆ, ಜಾಗ್ತಿಗೆ ತಾವೇ ಭೇಟಿ ನೀಡುವುದಾಗಿ ಮತ್ತು ಸಂಸತ್ತಿನ ಒಳಗೆ ಹಾಗೂ ಹೊರಗೆ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದಾರೆ' ಎಂದು ಕೌಲ್ ಹೇಳಿದರು.

ಮತ್ತೊಬ್ಬ ಸದಸ್ಯ ಜಿತೇಂದ್ರ ಕಚ್ರೂ ಮಾತನಾಡಿ, 'ಕಾಶ್ಮೀರದಿಂದ ವಲಸೆ ಬಂದು ನೆಲೆಸಿರುವ ಉತ್ತರ ಪ್ರದೇಶದಿಂದ ನಿಯೋಗದ ಇತರ ಸದಸ್ಯರೊಂದಿಗೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲು ಬಂದಿದ್ದೇನೆ. ಅವರು (ಗಾಂಧಿ) ತುಂಬಾ ಒಳ್ಳೆಯ ಮನುಷ್ಯ ಮತ್ತು ತುಂಬಾ ಸರಳ ವ್ಯಕ್ತಿ. ಅವರು ತಾಳ್ಮೆಯಿಂದ ನಮ್ಮ ಸಮಸ್ಯೆಗಳನ್ನು ಆಲಿಸಿದರು ಮತ್ತು ನಮ್ಮ ಮಾತುಗಳನ್ನು ಕೇಳಲು ಅವರಿಗೆ ಸಮಯವಿರುವುದು ಹೃದಯಸ್ಪರ್ಶಿಯಾಗಿದೆ' ಎಂದರು. 

ಆರಂಭದಲ್ಲಿ ಅವರನ್ನು 13 ಸದಸ್ಯರ ನಿಯೋಗ ಭೇಟಿಯಾಗಬೇಕಿತ್ತು. ಆದರೆ, ಇನ್ನೂ ಹಲವರು ಅವರೊಂದಿಗೆ ಸೇರಿಕೊಂಡರು ಮತ್ತು ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ನಾವು ಎತ್ತಿದ್ದೇವೆ ಎಂದು ಹೇಳಿದರು.

ಬಿಜೆಪಿಯು ತನ್ನ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸಲು ಸಮುದಾಯವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಕಚ್ರೂ, 'ಅವರು ನಿಜವಾಗಿಯೂ ಕಾಶ್ಮೀರಿ ಪಂಡಿತರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶವನ್ನು ಹೊಂದಿಲ್ಲ. ಏಕೆಂದರೆ, ಅವರಿಗೆ ಧರ್ಮದ ಆಧಾರದ ಮೇಲೆ ದ್ವೇಷವನ್ನು ಹರಡುವುದು ರಾಜಕೀಯ ಕಾರ್ಯಸೂಚಿಯಾಗಿದೆ' ಎಂದು ದೂರಿದರು.

ನಾವು ಕಾಶ್ಮೀರದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಒಟ್ಟಿಗೆ ವಾಸಿಸುತ್ತಿದ್ದೆವು. ನಾವು ಸಂಸ್ಕೃತಿ, ಡ್ರೆಸ್ಸಿಂಗ್ ಮತ್ತು ಉಪನಾಮಗಳನ್ನು ಹಂಚಿಕೊಳ್ಳುತ್ತೇವೆ. ಈ ರೀತಿಯ ವಾತಾವರಣ ಎಂದಿಗೂ ಇರಲಿಲ್ಲ ಮತ್ತು ನಾವೆಲ್ಲರೂ ಒಟ್ಟಿಗೆ ವಾಸಿಸುತ್ತಿದ್ದೆವು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com