ಮೈತ್ರಿಯಲ್ಲಿ ಬಿರುಕು? ನಿತೀಶ್‌ ಕುಮಾರ್ ದುರ್ಬಲಗೊಳಿಸಲು ಪಿತೂರಿ: ಜೆಡಿಯು ಹಿರಿಯ ನಾಯಕ ಉಪೇಂದ್ರ ಕುಶ್ವಾಹಾ ಆರೋಪ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ದುರ್ಬಲಗೊಳಿಸಲು ಸಂಚು ರೂಪಿಸಲಾಗಿದೆ ಎಂದು ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಮಂಗಳವಾರ ಆರೋಪಿಸಿದ್ದಾರೆ.
ಉಪೇಂದ್ರ ಕುಶ್ವಾಹ
ಉಪೇಂದ್ರ ಕುಶ್ವಾಹ
Updated on

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ದುರ್ಬಲಗೊಳಿಸಲು ಸಂಚು ರೂಪಿಸಲಾಗಿದೆ ಎಂದು ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹಾ ಮಂಗಳವಾರ ಆರೋಪಿಸಿದ್ದಾರೆ.

ಇದೇ ವೇಳೆ ಜೆಡಿಯು ಪಕ್ಷವು ಆರ್‌ಜೆಡಿಯೊಂದಿಗೆ ಯಾವ ಒಪ್ಪಂದ ಮಾಡಿಕೊಂಡಿದೆ ಎಂಬುದನ್ನು ಬಹಿರಂಗಪಡಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಅವರನ್ನು ಕೇಳಿದ್ದಾರೆ.

ಮಹಾಮೈತ್ರಿಕೂಟಕ್ಕೆ ಸೇರುವ ಮೊದಲು ಜೆಡಿಯು ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಆರ್‌ಜೆಡಿ ಹೇಳಿಕೊಳ್ಳುತ್ತಿದೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ರಾಜೀವ್ ರಂಜನ್ ಸಿಂಗ್ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆಯಬೇಕು ಮತ್ತು ಪಕ್ಷದ ಕೆಲವು ನಾಯಕರು ಆರ್‌ಜೆಡಿಯೊಂದಿಗೆ ಯಾವ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಕುಶ್ವಾಹ ಹೇಳಿದ್ದಾರೆ.

ನಿತೀಶ್ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವಂತೆ ಒಪ್ಪಂದದಲ್ಲಿ ಏನಾದರೂ ಷರತ್ತು ಇದೆಯೇ ಎಂದು ಕುಶ್ವಾಹ ಪ್ರಶ್ನಿಸಿದ್ದಾರೆ? ನಿತೀಶ್  ಕುಮಾರ್ ಸೇರಿದಂತೆ ಪಕ್ಷದ ಉನ್ನತ ನಾಯಕರ ವಿರುದ್ಧ  ಕುಶ್ವಾಹಾ ನಿರಂತರ ವಾಗ್ದಾಳಿ ನಡೆಸಿದ್ದಾರೆ. ಕುಶ್ವಾಹ ಪಕ್ಷವನ್ನು ತೊರೆಯಲು ಮನಸ್ಸು ಮಾಡಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು.

ಕುಶ್ವಾಹ ಅವರು ತಮ್ಮ ರಾಷ್ಟ್ರೀಯ ಲೋಕ ಸಮತಾ ಪಕ್ಷವನ್ನು (ಆರ್‌ಎಲ್‌ಎಸ್‌ಪಿ) ಪುನರುಜ್ಜೀವನಗೊಳಿಸಬಹುದು ಹಾಗೂ  2024 ರಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ವದಂತಿಯೂ ಇದೆ. ನಿತೀಶ್ ಕುಮಾರ್ ಅವರನ್ನು ನಿರಂತರವಾಗಿ ದುರ್ಬಲಗೊಳಿಸಲು ಯತ್ನಿಸಲಾಗುತ್ತಿದೆ. ಅವರು ನನ್ನನ್ನು ಕರೆದರೆ ನಾನು ಅವರ ಮುಂದೆ ಎಲ್ಲವನ್ನೂ ಸ್ಪಷ್ಟಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ತಮ್ಮ ನಾಯಕ (ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್) ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಆರ್‌ಜೆಡಿ ನಾಯಕರು ಏಕೆ ಒತ್ತಾಯಿಸುತ್ತಿದ್ದಾರೆ. ನಿತೀಶ್ ಆದಷ್ಟು ಜಾಗರೂಕರಾಗಿರಬೇಕು ಎಂದು ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಕುಶ್ವಾಹ ಹೇಳಿದ್ದಾರೆ.

ಮಂಗಳವಾರ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರ ಜನ್ಮದಿನದ ಅಂಗವಾಗಿ ಜೆಡಿ (ಯು) ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕುಶ್ವಾಹಾ ಅವರನ್ನು ಆಹ್ವಾನಿಸಲಾಗಿಲ್ಲ. ಸೋಮವಾರ ಪಾಟ್ನಾದಲ್ಲಿ ಆಯೋಜಿಸಿದ್ದ ಮಹಾರಾಣಾ ಪ್ರತಾಪ್ ಸಿಂಗ್ ಅವರಿಗೆ ಸಂಬಂಧಿಸಿದ ಕಾರ್ಯಕ್ರಮಕ್ಕೂ ಅವರನ್ನು ಪಕ್ಷ ಆಹ್ವಾನಿಸಿರಲಿಲ್ಲ.  ಪಕ್ಷದ ಉನ್ನತ ನಾಯಕರ ನಿರ್ದೇಶನದ ಮೇರೆಗೆ ಪಕ್ಷದ ಕಾರ್ಯಕ್ರಮಗಳಿಗೆ ಕುಶ್ವಾಹ ಅವರಿಗೆ ಆಹ್ವಾನ ನೀಡಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕುಶ್ವಾಹಾ ಹೇಳಿಕೆಗೆ ಪ್ರತಿಕ್ರಿಯಿಸಿದ ನಿತೀಶ್, ನನ್ನನ್ನು ಏನೂ ಕೇಳಬೇಡಿ. ಆತನ ವಿಷಯ ಬಿಡಿ,  ಅವರು (ಕುಶ್ವಾಹ) ತನ್ನ ಮನಸ್ಸಿಗೆ ಬಂದದ್ದನ್ನು ಹೇಳುತ್ತಲೇ ಇರುತ್ತಾರೆ. ಅವರು ಮಾತನಾಡಲಿ... ನನ್ನ ಪಕ್ಷದ ಯಾವ ನಾಯಕರೂ ಅವರ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.

ಜೆಡಿ (ಯು) ನ ಮಾಜಿ ಸಂಸದ ಆರ್‌ಸಿಪಿ ಸಿಂಗ್, "ನಿತೀಶ್ ಅವರ ಸಮಯ ಈಗ ಮುಗಿದಿದೆ" ಎಂದು ವ್ಯಂಗ್ಯವಾಗಿ ಹೇಳಿರುವುದರಿಂದ ಮುಂಬರುವ ದಿನಗಳಲ್ಲಿ ಜೆಡಿ (ಯು) ನಡುವಿನ ಸಂಘರ್ಷ ಹೆಚ್ಚಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com