ಮೀರತ್ (ಉತ್ತರ ಪ್ರದೇಶ): ಭಾರತದಲ್ಲಿ, ರಾಷ್ಟ್ರಗೀತೆಗೆ ಮಾಡುವ ಅವಮಾನವನ್ನು ರಾಷ್ಟ್ರಕ್ಕೆ ಮಾಡುವ ಅಗೌರವ ಎಂದು ಪರಿಗಣಿಸಲಾಗುತ್ತದೆ. ರಾಷ್ಟ್ರ ಗೌರವ ಕಾಯ್ದೆ 1971 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
ಮೊನ್ನೆ ಜನವರಿ 26ರಂದು ದೇಶವು 74ನೇ ಗಣರಾಜ್ಯೋತ್ಸವ ಆಚರಿಸಿದ ದಿನದಂದು, ಉತ್ತರ ಪ್ರದೇಶ ಮೀರತ್ ನಲ್ಲಿ ಯುವಕರ ಗುಂಪೊಂದು ರಾಷ್ಟ್ರಗೀತೆಗೆ ಅವಮಾನ ಮಾಡಿದ ಪ್ರಸಂಗ ಬೆಳಕಿಗೆ ಬಂದಿದೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆಗಿದೆ.
ರಾಷ್ಟ್ರಗೀತೆ ಮೊಳಗುತ್ತಿದ್ದ ವೇಳೆ ಯುವಕನೊಬ್ಬ ಟೆರೇಸ್ ಮೇಲೆ ಅಶ್ಲೀಲವಾಗಿ ಕುಣಿದಿದ್ದಾನೆ. ಈ ಸಮಯದಲ್ಲಿ, ಇತರರು ವೀಡಿಯೊದಲ್ಲಿ ನಗುತ್ತಿರುವಂತೆ ಕಾಣುತ್ತಿದೆ. ಈ ಯುವಕ ರಾಷ್ಟ್ರಗೀತೆಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಯಾರೋ ಚಿತ್ರೀಕರಿಸಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ಪೊಲೀಸರೇ ಈ ವಿಚಾರವನ್ನು ಗಮನಕ್ಕೆ ತಂದರು.
ಓರ್ವ ಬಂಧನ: ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಇಬ್ಬರು ಯುವಕರನ್ನು ಪೊಲೀಸರು ಗುರುತಿಸಿದ್ದಾರೆ. ಒಬ್ಬ ಯುವಕನ ಹೆಸರು ಅಶ್ರಫ್. ನಗುತ್ತಿರುವ ಯುವಕನನ್ನು ಅದ್ನಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಈದ್ಗಾ ನಿವಾಸಿಗಳು. ಪೊಲೀಸರು ಅದ್ನಾನ್ ನನ್ನು ವಶಕ್ಕೆ ಪಡೆದಿದ್ದು, ಅಶ್ರಫ್ ತಲೆಮರೆಸಿಕೊಂಡಿದ್ದಾನೆ.
ವೈರಲ್ ವಿಡಿಯೋದಲ್ಲಿ ಏನಿದೆ?: ವಿಡಿಯೋದಲ್ಲಿ ಹಿನ್ನೆಲೆಯಲ್ಲಿ ರಾಷ್ಟ್ರಗೀತೆ ಪ್ಲೇ ಆಗುತ್ತಿದೆ. 29 ಸೆಕೆಂಡುಗಳ ವಿಡಿಯೋದಲ್ಲಿ ಯುವಕರು ರಾಷ್ಟ್ರಗೀತೆಯನ್ನು ಗೇಲಿ ಮಾಡುತ್ತಿರುವುದು ಕಂಡುಬಂದಿದೆ. ಆರಂಭದಲ್ಲಿ, ಕಪ್ಪು ಜಾಕೆಟ್ ಮತ್ತು ಜೀನ್ಸ್ ಧರಿಸಿದ ಯುವಕ ರಾಷ್ಟ್ರಗೀತೆಯನ್ನು ಹಾಡುತ್ತಿರುವಾಗ ಸೆಲ್ಯೂಟ್ ಮಾಡುತ್ತಿರುವುದು ಕಂಡುಬರುತ್ತದೆ. ರಾಷ್ಟ್ರಗೀತೆಯು ಸುಮಾರು 8 ಸೆಕೆಂಡುಗಳಲ್ಲಿ ಕೊನೆಗೊಳ್ಳುತ್ತದೆ. ಆಗ ಆ ಯುವಕ ಸೆಲ್ಯೂಟ್ ಮಾಡುವ ಭಂಗಿಯಿಂದ ದೂರ ಸರಿದು ಜಾಕೆಟ್ ಹಿಡಿದು ಅಶ್ಲೀಲವಾಗಿ ಕುಣಿಯಲು ಆರಂಭಿಸುತ್ತಾನೆ.
ಡ್ಯಾನ್ಸ್ ಮಾಡುವವನ ಹಿಂದೆ ಮತ್ತೊಬ್ಬ ಯುವಕ ನಿಂತಿದ್ದಾನೆ. ಡ್ಯಾನ್ಸ್ ಮಾಡುವ ಯುವಕನ ಈ ಕೃತ್ಯಕ್ಕೆ ಇತರರು ನಗುತ್ತಿದ್ದಾರೆ. ಯುವಕರ ಈ ಚೇಷ್ಟೆಗಳನ್ನು ಮತ್ತೊಬ್ಬ ವ್ಯಕ್ತಿ ವಿಡಿಯೋ ಮಾಡಿದ್ದಾನೆ. ಹಿನ್ನಲೆಯಲ್ಲಿ ನಗುವಿನ ಶಬ್ದಗಳೂ ಕೇಳಿಬರುತ್ತಿವೆ. ಟೆರೇಸ್‌ನಲ್ಲಿದ್ದ ಇತರ ಜನರು ಈ ಯುವಕರ ಕೃತ್ಯವನ್ನು ನೋಡಿ ನಗುತ್ತಾರೆ. ರಾಷ್ಟ್ರಗೀತೆಯನ್ನು ಅವಮಾನಿಸಿ ನಗುತ್ತಿದ್ದ ಮತ್ತೊಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದೂ ಜಾಗರಣ್ ಮಂಚ್ ನಿಂದ ದೂರು ದಾಖಲು: ಹಿಂದೂ ಜಾಗರಣ ಮಂಚ್‌ನ ಮಾಜಿ ಮೆಟ್ರೋಪಾಲಿಟನ್ ಅಧ್ಯಕ್ಷ ಸಚಿನ್ ಸಿರೋಹಿ, ಈ ವಿಡಿಯೋದಲ್ಲಿ ಕಂಡುಬರುವ ಯುವಕರನ್ನು ಶೀಘ್ರವಾಗಿ ಬಂಧಿಸುವಂತೆ ರೈಲ್ವೇ ರಸ್ತೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೇಶದ್ರೋಹದ ಆರೋಪದ ಮೇಲೆ ಯುವಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆಯೂ ಮನವಿ ಮಾಡಿದ್ದಾರೆ.
Advertisement