ಮಹಾರಾಷ್ಟ್ರ ಬಸ್ ಅಗ್ನಿ ದುರಂತ, 25 ಮಂದಿ ಸಜೀವ ದಹನ: ನಿದ್ರೆಗೆ ಜಾರಿದ್ದ ಚಾಲಕ?, 'ಟೈರ್ ಸ್ಫೋಟದಿಂದ ಅಪಘಾತವಾಗಿಲ್ಲ'.. ಆರ್ ಟಿಒ ಹೇಳಿದ್ದೇನು?

25 ಮಂದಿಯ ಸಜೀವ ದಹನಕ್ಕೆ ಕಾರಣವಾದ ಮಹಾರಾಷ್ಟ್ರ ಬಸ್ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಬಸ್ ದುರಂತಕ್ಕೆ ಕಾರಣವಾದ ನಾನಾ ಅಂಶಗಳ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ.
ಮಹಾರಾಷ್ಟ್ರ ಬಸ್ ಅಗ್ನಿ ದುರಂತ
ಮಹಾರಾಷ್ಟ್ರ ಬಸ್ ಅಗ್ನಿ ದುರಂತ

ಮುಂಬೈ: 25 ಮಂದಿಯ ಸಜೀವ ದಹನಕ್ಕೆ ಕಾರಣವಾದ ಮಹಾರಾಷ್ಟ್ರ ಬಸ್ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಬಸ್ ದುರಂತಕ್ಕೆ ಕಾರಣವಾದ ನಾನಾ ಅಂಶಗಳ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ.

ಮಹಾರಾಷ್ಟ್ರದ ಎಕ್ಸ್‌ಪ್ರೆಸ್‌ವೇಯಲ್ಲಿ ಕನಿಷ್ಠ 25 ಜನರನ್ನು ಬಲಿತೆಗೆದುಕೊಂಡ ಬಸ್ ಅಗ್ನಿ ದುರಂತದ ಕುರಿತು ಪೊಲೀಸರು ತನಿಖೆ ನಡೆಸಿದ್ದು, ಅಪಘಾತಕ್ಕೆ ಕಾರಣವಾದ ಅಂಶಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಬುಲ್ಧಾನಾ ನಗರದ ಸಮೃದ್ಧಿ-ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಬೆಳಗಿನ ಜಾವ 1:35 ರ ಸುಮಾರಿಗೆ ಬಸ್‌ನ ಟೈರ್ ಒಡೆದು ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಅಫಘಾತದಿಂದ ಬಸ್ ನ ಇಂಧನ ಟ್ಯಾಂಕ್‌ಗೆ ಹಾನಿಯಾಗಿದ್ದು, ಡೀಸೆಲ್ ಸೋರಿಕೆಯಾಗಿದೆ. ಬಳಿಕ ಬೆಂಕಿಹೊತ್ತಿಕೊಂಡು ಅಗ್ನಿ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ದುರಂತ ಸಂಭವಿಸಿದಾಗ 33 ಪ್ರಯಾಣಿಕರು ಬಸ್‌ನಲ್ಲಿದ್ದರು, ಅದರಲ್ಲಿ ಎಂಟು ಮಂದಿ ಬದುಕುಳಿದಿದ್ದಾರೆ. ನಾಲ್ವರಿಗೆ ಗಾಯಗಳಾಗಿವೆ. ಚಾಲಕ ಮತ್ತು ಒಬ್ಬ ಕ್ಲೀನರ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು ಓರ್ವ ಸಹ ಚಾಲಕ ಸಾವಿಗೀಡಾಗಿದ್ದಾನೆ. ಅಪಘಾತ ಸಂಭವಿಸಿದಾಗ ಹೆಚ್ಚಿನ ಪ್ರಯಾಣಿಕರು ಮಲಗಿದ್ದ ಕಾರಣ ದುರಂತದಲ್ಲಿ ಹೆಚ್ಚಿನ ಮಂದಿ ಸಾವಿಗೀಡಾಗಿದ್ದಾರೆ.

ಏತನ್ಮಧ್ಯೆ ಬಸ್ ದುರಂತಕ್ಕೆ ಟೈರ್ ಸ್ಫೋಟ ಕಾರಣ..ಟೈರ್ ಸ್ಫೋಟಗೊಂಡಿದ್ದರಿಂದ  ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂಬಕ್ಕೆ ಢಿಕ್ಕಿಯಾಗಿದೆ ಎಂದು ಹೇಳಲಾಗಿತ್ತಾದರೂ ಈ ವರದಿಯನ್ನು ಅಲ್ಲಗಳೆದಿರುವ ಆರ್ ಟಿಒ ಅಧಿಕಾರಿಗಳು ಟೈರ್ ಸ್ಫೋಟದಿಂದ ಬಸ್ ಅಪಘಾತ ಸಂಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದು ವಾದದಲ್ಲಿ ಅಪಘಾತ ಸಂಭವಿಸಿದ್ದ ವೇಳೆ ಬಸ್ ನ ಚಾಲಕ ನಿದ್ರೆ ಮಂಪರಿನಲ್ಲಿದ್ದ.. ಹೀಗಾಗಿ ಆತ ಅರೆಕ್ಷಣ ಬಸ್ ನ ನಿಯಂತ್ರಣ ಕಳೆದುಕೊಂಡ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಬಸ್ ಮುಂಭಾಗದ ಟೈರ್ ಡಿವೈಡರ್‌ಗೆ ತಗುಲಿದ ಪರಿಣಾಮ ಬಸ್ ಕಂಬಕ್ಕೆ ಢಿಕ್ಕಿಯಾಗಿದೆ. ಬಸ್ ಚಾಸಿಸ್‌ನಿಂದ ಮುಂಭಾಗದ ಆಕ್ಸಲ್ ಮುರಿದು ಬಸ್ ಪಲ್ಟಿಯಾಗಿದೆ. ಬಳಿಕ ಬಸ್ ಗೆ ಬೆಂಕಿ ಹೊತ್ತಿದೆ. ಇದೇ ಸಂದರ್ಭದಲ್ಲಿ ಬಸ್ ನ ಡೀಸೆಲ್ ಟ್ಯಾಂಕ್ ಗೆ ಹಾನಿಯಾಗಿದ್ದು, ಅಲ್ಲಿಂದ ಡೀಸೆಲ್ ಸೋರಿಕೆಯಾಗಿ ಬೆಂಕಿ ಇಡೀ ಬಸ್ ಗೆ ವ್ಯಾಪಿಸಿದೆ. ಇದೇ ವೇಳೆ ಬಸ್ ಅಪಘಾತದಿಂದ ಬಸ್ ಪಲ್ಟಿಯಾದ ಪರಿಣಾಮ ಬಸ್ ನ ತುರ್ತು ನಿರ್ಗಮನ ದ್ವಾರ (ಎಮರ್ಜೆನ್ಸಿ ಎಕ್ಸಿಟ್ ಡೋರ್) ಜಖಂ ಆಗಿದ್ದು ಅದನ್ನೂ ಕೂಡ ತೆರೆಯಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ವೇಗವೂ ಕಾರಣವಲ್ಲ
ಆದಾಗ್ಯೂ, ಸಮೃದ್ಧಿ ಎಕ್ಸ್‌ಪ್ರೆಸ್‌ವೇಯ ಪ್ರವೇಶ ಬಿಂದುವಿನಿಂದ ಸಿಂಧಖೇದರಾಜದಲ್ಲಿ ಅಪಘಾತ ಸಂಭವಿಸಿದ ಸ್ಥಳ ಅಂದರೆ ಸುಮಾರು 152 ಕಿಲೋಮೀಟರ್ ವ್ಯಾಪ್ತಿಯನ್ನು ಕ್ರಮಿಸಲು ಬಸ್ ಎರಡು ಗಂಟೆ 24 ನಿಮಿಷಗಳನ್ನು ತೆಗೆದುಕೊಂಡಿದ್ದು ಇದು ಬಸ್ ವೇಗದ ಕಾರಣ ಅಪಘಾತ ಸಂಭವಿಸಿರಬಹುದು ಎಂಬ ವಾದವನ್ನು ತಳ್ಳಿ ಹಾಕಿದೆ. ಬಸ್ ರಾತ್ರಿ 11:08 ಕ್ಕೆ ಎಕ್ಸ್‌ಪ್ರೆಸ್‌ವೇ ಪ್ರವೇಶಿಸಿದ್ದು, ಅಪಘಾತವು 152 ಕಿಲೋಮೀಟರ್ ದೂರದಲ್ಲಿ ರಾತ್ರಿ 1:32 ಕ್ಕೆ ಸಂಭವಿಸಿದೆ. ಅಂದರೆ ಬಸ್‌ನ ಸರಾಸರಿ ವೇಗ ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಮಾತ್ರ ಚಲಿಸುತ್ತಿತ್ತು ಎಂದು ಅಂದಾಜಿಸಲಾಗಿದೆ. ಹೀಗಾಗಿ ಬಸ್ ಅತಿವೇಗದಿಂದ ಚಲಿಸುತ್ತಿತ್ತು ಎಂಬ ಊಹೆ ತಪ್ಪು ಎಂದು ಅಧಿಕಾರಿಗಳು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com