ಶಿವಸೇನೆ ಜೊತೆ ಸೇರಬಹುದಾದರೆ, ಬಿಜೆಪಿ ಜೊತೆಗೂ ಸೇರಬಹುದು, ಪ್ರಧಾನಿ ಮೋದಿ ಅಭಿವೃದ್ಧಿ ಕೆಲಸ ಉತ್ತಮವಾಗಿದೆ: ಅಜಿತ್ ಪವಾರ್

ಮಹಾರಾಷ್ಟ್ರದಲ್ಲಿ ಭಾನುವಾರ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಶ್ಲಾಘಿಸಿದ್ದು, ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶವು ಪ್ರಗತಿ ಹೊಂದುತ್ತಿದೆ, ಅಭಿವೃದ್ಧಿ ಬೆಂಬಲಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಅಜಿತ್  ಪವಾರ್
ಅಜಿತ್ ಪವಾರ್
Updated on

ಮುಂಬೈ: ಮಹಾರಾಷ್ಟ್ರದಲ್ಲಿ ಭಾನುವಾರ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಶ್ಲಾಘಿಸಿದ್ದು, ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶವು ಪ್ರಗತಿ ಹೊಂದುತ್ತಿದೆ, ಅಭಿವೃದ್ಧಿ ಬೆಂಬಲಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಹಾಲಿ ಬಿಜೆಪಿ-ಶಿವಸೇನೆ (ಏಕನಾಥ್ ಶಿಂಧೆ ಬಣ)ಯ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವ ಅಜಿತ್ ಪವಾರ್ ಇಂದು ಸಂಜೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮಾತನಾಡಿದರು. ಈ ವೇಳೆ, 'ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಅಂಶಗಳನ್ನು ಪರಿಗಣಿಸಿ, ನಾವು ಅಭಿವೃದ್ಧಿಯನ್ನು ಬೆಂಬಲಿಸಬೇಕು ಎಂದು ನಾವು ಭಾವಿಸಿದ್ದೇವೆ. ದೇಶದ ಅಭಿವೃದ್ಧಿಗಾಗಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಾಗಿ ಏಕನಾಥ್‌ ಶಿಂದೆ ನೇತೃತ್ವದ ಸರ್ಕಾರದ ಭಾಗವಾಗಲು ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಕಾರ್ಯಗಳಿಂದ ದೇಶದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ಜನಪ್ರಿಯ ಎಂದು ಹೇಳಿದ್ದಾರೆ.

ಇದೇ ವೇಳೆ ಎನ್‌ಸಿಪಿ ವಿಭಜನೆಗೊಂಡಿದೆ ಎಂಬುದನ್ನು ತಳ್ಳಿಹಾಕಿರುವ ಮುಖಂಡ ಅಜಿತ್ ಪವಾರ್‌, ಭವಿಷ್ಯದಲ್ಲಿಯೂ ತಾವು ಎನ್‌ಸಿಪಿ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಂತೆಯೇ ಶಿಂದೆ ನೇತೃತ್ವದ ಸರ್ಕಾರದ ಭಾಗವಾಗುವ ನಿಲುವನ್ನು ಪಕ್ಷದ ಎಲ್ಲ ಶಾಸಕರು ಬೆಂಬಲಿಸಿದ್ದಾರೆ. ಬಿಜೆಪಿ ಜೊತೆ ಕೈಜೋಡಿಸಿದ್ದನ್ನು ಸಮರ್ಥಿಸಿಕೊಂಡ ಅವರು, ‘ನಾವು ಶಿವಸೇನೆ ಜೊತೆ ಸೇರಬಹುದಾದರೆ, ಬಿಜೆಪಿ ಜೊತೆಗೂ ಸೇರಬಹುದು’ ಎಂದಿದ್ದಾರೆ.

ನಾಗಾಲ್ಯಾಂಡ್‌ನಲ್ಲಿಯೂ ಇಂತಹುದೇ ಬೆಳವಣಿಗೆ ಆಗಿದೆ. ಒಟ್ಟಾಗಿ ಸಮಗ್ರ ಅಭಿವೃದ್ಧಿಯನ್ನು ಪರಿಗಣಿಸಲಾಗಿದೆ. ಖಾತೆಗಳ ಹಂಚಿಕೆ ಕೆಲವೇ ದಿನದಲ್ಲಿ ನಡೆಯಲಿದ್ದು, ಅದರ ಹಿಂದೆಯೇ ಕಾರ್ಯತತ್ಪರವಾಗುತ್ತೇವೆ ಎಂದು ಹೇಳಿದರು.

ಎನ್‌ಸಿಪಿ ಬಂಡಾಯ ನಾಯಕ ಅಜಿತ್ ಪವಾರ್ ಅವರು ತಮ್ಮ ಪಕ್ಷದ ಎಂಟು ನಾಯಕರೊಂದಿಗೆ ಇಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಗೊಂಡರು. ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಂದು ರಾಜಭವನದಲ್ಲಿ ಅಜಿತ್ ಪವಾರ್, ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಅದಿತಿ ತತ್ಕರೆ, ಧನಂಜಯ್ ಮುಂಡೆ, ಹಸನ್ ಮುಶ್ರೀಫ್, ರಾಮರಾಜೇ ನಿಂಬಾಳ್ಕರ್, ಸಂಜಯ್ ಬನ್ಸೋಡೆ ಮತ್ತು ಅನಿಲ್ ಭೈದಾಸ್ ಪಾಟೀಲ್ ಪ್ರಮಾಣ ವಚನ ಸ್ವೀಕರಿಸಿದರು.

2022 ರ ಜೂನ್‌ನಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಗಳಿಂದ ಶಿವಸೇನೆಯ ಏಕನಾಥ್ ಶಿಂದೆ ಅವರು ತಮ್ಮ ಗುಂಪಿನೊಂದಿಗೆ ಎನ್‌ಸಿಪಿ, ಶಿವಸೇನೆ, ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು. ಏಕನಾಥ ಶಿಂದೆ ಜೂನ್ 30, 2022 ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅದಾದ ಒಂದು ವರ್ಷದ ಬಳಿಕ ಎನ್‌ಸಿಪಿಯ ಅಜಿತ್ ಪವಾರ್ ಅವರೇ ಶಿಂದೆ ಬೆನ್ನಿಗೆ ನಿಂತಿದ್ದಾರೆ. 

2019ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿ 105, ಶಿವಸೇನೆ 56, ಎನ್‌ಸಿಪಿ 54, ಕಾಂಗ್ರೆಸ್ 44 ಹಾಗೂ ಇತರರು 29 ಸ್ಥಾನಗಳನ್ನು ಗೆದ್ದಿದ್ದರು. 2024 ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com