ಪಶ್ಚಿಮ ಬಂಗಾಳ ಚುನಾವಣಾ ಹಿಂಸಾಚಾರ; 17 ವರ್ಷದ ವಿದ್ಯಾರ್ಥಿ ಬಲಿ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಪಶ್ಚಿಮ ಬಂಗಾಳದಲ್ಲಿ ಜುಲೈ 8 ರಂದು ನಿಗದಿಯಾಗಿದ್ದ ಗ್ರಾಮೀಣ ಚುನಾವಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಉತ್ತರ 24 ಪರಗಣ ಜಿಲ್ಲೆಯ ದೇಗಂಗಾ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಶಾಲಾ ವಿದ್ಯಾರ್ಥಿಯೊಬ್ಬರು ಸಾವಿಗೀಡಾಗಿದ್ದು, ಕಳೆದ 26 ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಜುಲೈ 8 ರಂದು ನಿಗದಿಯಾಗಿದ್ದ ಗ್ರಾಮೀಣ ಚುನಾವಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಉತ್ತರ 24 ಪರಗಣ ಜಿಲ್ಲೆಯ ದೇಗಂಗಾ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಶಾಲಾ ವಿದ್ಯಾರ್ಥಿಯೊಬ್ಬರು ಸಾವಿಗೀಡಾಗಿದ್ದು, ಕಳೆದ 26 ದಿನಗಳಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಹನ್ನೊಂದನೇ ತರಗತಿ ವಿದ್ಯಾರ್ಥಿ ಇಮ್ರಾನ್ ಹಸನ್ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ ರ‍್ಯಾಲಿ ಮತ್ತು ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ತೆರಳಿದ್ದರು. ಕಾರ್ಯಕ್ರಮದಿಂದ ಹಿಂತಿರುಗುವಾಗ ಸಿಪಿಐ(ಎಂ) ಮತ್ತು ಇಂಡಿಯನ್ ಸೆಕ್ಯುಲರ್ ಫೋರ್ಸ್ ಬೆಂಬಲಿಗರು ಟಿಎಂಸಿ ಬೆಂಬಲಿಗರ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ನಾವು ಐಎಸ್‌ಎಫ್‌ನ ನಾಯಕರೊಬ್ಬರ ಒಡೆತನದ ಮನೆಯ ಮುಂದೆ ಹೋಗುತ್ತಿದ್ದಾಗ, ಎರಡು ಅಂತಸ್ತಿನ ಕಟ್ಟಡದ ಮೇಲಿನಿಂದ ಬಾಂಬ್‌ಗಳನ್ನು ಎಸೆಯಲಾಯಿತು. ನಾವು ಚದುರಿ ಹೋದೆವು ಮತ್ತು ಸ್ವಲ್ಪ ಸಮಯದ ನಂತರ ಹಸನ್ ನೆಲದ ಮೇಲೆ ಬಿದ್ದಿರುವುದು ನಮಗೆ ತಿಳಿಯಿತು.  ಒಂದು ಬಾಂಬ್ ಆತನ ಎದೆಗೆ ಬಡಿದು ಸ್ಫೋಟಿಸಿತು. ನಾವು ಆತನನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದೇವೆ. ಅಲ್ಲಿ ವೈದ್ಯರು ಆತ ಸಾವಿಗೀಡಾಗಿರುವುದಾಗಿ ತಿಳಿಸಿದರು' ಎಂದು ಸ್ಥಳೀಯ ಟಿಎಂಸಿ ಬೆಂಬಲಿಗ ಮೊಹಮ್ಮದ್ ಸೆಲಿಮ್ ಮೊಂಡಲ್ ಹೇಳಿದರು.

ದಾಳಿಯನ್ನು ಸಿಪಿಐ(ಎಂ) ಮತ್ತು ಐಎಸ್‌ಎಫ್ ಜಂಟಿಯಾಗಿ ನಡೆಸಿದ್ದು, ಅವರು ದಕ್ಷಿಣ ಬಂಗಾಳದ ಕೆಲವು ದಾಳಿಗಳಲ್ಲಿ ಕೈಜೋಡಿಸಿದ್ದಾರೆ ಎಂದು ಮೊಂಡಲ್ ಆರೋಪಿಸಿದ್ದಾರೆ. 

ದಾಳಿಕೋರರು ಗುಂಡು ಹಾರಿಸಿದ್ದಾರೆ ಎಂದು ಹಸನ್ ಅವರ ಕುಟುಂಬ ಆರೋಪಿಸಿದೆ. ಆದರೆ, ಪೊಲೀಸರು ಈ ಹೇಳಿಕೆಯನ್ನು ದೃಢಪಡಿಸಿಲ್ಲ.

ವಿದ್ಯಾರ್ಥಿಯ ಸಾವಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಚುನಾವಣಾ ಆಯುಕ್ತ ತಜೀವ ಸಿನ್ಹಾ ಕಾರಣ ಎಂದು ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಹೇಳಿದ್ದಾರೆ. 

'ರಾಜ್ಯ ಚುನಾವಣಾ ಸಮಿತಿ ಮತ್ತು ಸರ್ಕಾರವು ಲಭ್ಯವಿರುವ ಕೇಂದ್ರ ಪಡೆ ಸಿಬ್ಬಂದಿಯನ್ನು ಭದ್ರತಾ ಕಾರ್ಯಗಳಿಗೆ ಬಳಸಿಕೊಳ್ಳುತ್ತಿಲ್ಲ. ಹಸನ್ ಸಾವಿಗೆ ಮುಖ್ಯಮಂತ್ರಿ ಮತ್ತು ಎಸ್‌ಇಸಿ ಮುಖ್ಯಸ್ಥರು ಹೊಣೆಗಾರರು' ಎಂದು ಅವರು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com