ಮೂತ್ರವಿಸರ್ಜನೆ ಘಟನೆಗೆ RSS ಲಿಂಕ್ ಮಾಡಿ ವಿವಾದಿತ ಟ್ವೀಟ್​: ಬೋಜ್ ಪುರಿ ಗಾಯಕಿ ನೇಹಾ ಸಿಂಗ್ ವಿರುದ್ಧ ಪ್ರಕರಣ ದಾಖಲು

ಮಧ್ಯಪ್ರದೇಶದ ಬಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ RSS ಮತ್ತು ಗೋಮೂತ್ರವನ್ನು ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದ ಬೋಜ್ ಪುರಿ ಗಾಯಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೂತ್ರ ವಿಸರ್ಜನೆ ಪ್ರಕರಣ
ಮೂತ್ರ ವಿಸರ್ಜನೆ ಪ್ರಕರಣ

ಭೋಪಾಲ್: ಮಧ್ಯಪ್ರದೇಶದ ಬಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ RSS ಮತ್ತು ಗೋಮೂತ್ರವನ್ನು ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದ ಬೋಜ್ ಪುರಿ ಗಾಯಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಬಡಕಟ್ಟು ಜನಾಂಗದ ವ್ಯಕ್ತಿಯ ಮುಖದ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ನಡುವೆ ಬಿಹಾರದ ಬೋಜ್ ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ಈ ಘಟನೆಯನ್ನೇ ಆಧರಿಸಿ ಟ್ವೀಟ್​ವೊಂದನ್ನು ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ಎರಡು ಕಡೆ ಪೊಲೀಸ್​ ಕೇಸ್​ ದಾಖಲಾಗಿದೆ. IPC ಸೆಕ್ಷನ್ 153-A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪೂರ್ವಾಗ್ರಹ ಪಡಿಸುವ ಕೃತ್ಯಗಳನ್ನು ಮಾಡುವುದು)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನೇಹಾ, 'ಯುಪಿ ಮೇ ಕಾ ಬಾ' (ಯುಪಿಯಲ್ಲಿ ಏನಾಗುತ್ತಿದೆ)' ಮತ್ತು 'ಎಂಪಿ ಮೇ ಕಾ ಬಾ' (ಎಂಪಿಯಲ್ಲಿ ಏನಾಗುತ್ತಿದೆ) ಎಂದು ಟ್ವೀಟ್​ ಮಾಡಿ, ಅದರೊಂದಿಗೆ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸುತ್ತಿರುವ ರೇಖಾಚಿತ್ರ ಇದ್ದು, ಅದರ ಪಕ್ಕದಲ್ಲಿ ಚಡ್ಡಿಯೊಂದು ಬಿದ್ದಿರುವುದನ್ನು ಚಿತ್ರಿಸಲಾಗಿದೆ. ಇದರೊಂದಿಗೆ ''ಕಮಿಂಗ್​ ಸೂನ್.. ರಾಜಕೀಯ, ಮಾನವೀಯತೆ, ಲಜ್ಜಾಹೀನ, ಪ್ರವೇಶ್ ಶುಕ್ಲಾ ಅವರನ್ನು ಬಂಧಿಸಿ.." ಎಂಬ ಹ್ಯಾಶ್ ಟ್ಯಾಗ್​ಗಳನ್ನು ಬಳಕೆ ಮಾಡಲಾಗಿದೆ.

  
  

ಗಾಯಕಿ ನೇಹಾ ಸಿಂಗ್ ಟ್ವೀಟ್‌ನಲ್ಲಿನ ರೇಖಾಚಿತ್ರವು ಆರ್​ಎಸ್​ಎಸ್​ನ ಖಾಕಿ ಸಮವಸ್ತ್ರವನ್ನು ಸೂಚಿಸುತ್ತದೆ ಎಂದು ಇಂದೋರ್‌ನ ಬಿಜೆಪಿಯ ಕಾನೂನು ಕೋಶದ ಸಂಯೋಜಕ ನಿಮಿಷ್ ಪಾಠಕ್ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. 'ಬಿಹಾರದ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್, ಸಿಧಿ ಮೂತ್ರ ವಿಸರ್ಜನೆಯ ಘಟನೆಯನ್ನು ಹೋಲುವ ಫೋಟೋವನ್ನು ಅಪ್ಲೋಡ್ ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಚಿತ್ರದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಪವಿತ್ರ ದಾರವನ್ನೂ ಹಾಕಿಕೊಂಡಿದ್ದಾರೆ. ಫೋಟೋ ನೋಡಿದ ನಂತರ ನನಗೆ ಮಾನಸಿಕವಾಗಿ ನೋವಾಗಿದೆ. ನಾನು ಮೊದಲು ಆರ್‌ಎಸ್‌ಎಸ್ ಮತ್ತು ಎಬಿವಿಪಿಯೊಂದಿಗೆ ಸಂಬಂಧ ಹೊಂದಿದ್ದೆ. ಹಾಗಾಗಿ ಸಂಘಟನೆಯನ್ನು (ಆರ್‌ಎಸ್‌ಎಸ್) ಕಳಪೆಯಾಗಿ ಬಿಂಬಿಸುತ್ತಿರುವುದು ತುಂಬಾ ಬೇಸರ ತಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದು ಇಂದೋರ್‌ನ ಛೋಟಿ ಗ್ವಾಲ್ಟೋಲಿ ಪೊಲೀಸ್ ಠಾಣೆಗೆ ನಿಮಿಷ್ ಪಾಠಕ್​ ದೂರು ಸಲ್ಲಿಸಿದ್ದು, ಇದರ ಆಧಾರದ ಮೇಲೆ ಕೇಸ್​ ದಾಖಲಾಗಿದೆ.

ಮತ್ತೊಂದೆಡೆ, ಭೋಪಾಲ್​ನಲ್ಲೂ ಬಿಜೆಪಿಯ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ಉಸ್ತುವಾರಿ ಸೂರಜ್ ಖರೆ, ಗಾಯಕಿ ನೇಹಾ ಸಿಂಗ್ ವಿರುದ್ಧ ಹಬೀಬ್‌ಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನೇಹಾ ಸಿಂಗ್ ವಿವಾದಿತ ಟ್ವೀಟ್​ ಮೂಲಕ ಸಂಘ ಮತ್ತು ಆದಿವಾಸಿಗಳ ನಡುವೆ ದ್ವೇಷವನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ ಎಂದು ಸೂರಜ್ ಖರೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 153 (ಎ) (ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯ ಮುಖ ಮೇಲೆ ಮೂತ್ರ ಮಾಡಿರುವ ವಿಡಿಯೋ ವೈರಲ್​ ಇತ್ತೀಚೆಗೆ ಆಗಿತ್ತು. ಇದರ ನಂತರ ಘಟನೆ ಸಂಬಂಧಿಸಿದ ಆರೋಪಿಯ ಪ್ರವೇಶ್ ಶುಕ್ಲಾ ರಾವತ್ ಎಂಬಾತನನ್ನು ಬಂಧಿಸಲಾಗಿದೆ. ಅಲ್ಲದೇ, ಸಂತ್ರಸ್ತ ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಪಾದಪೂಜೆ ಮಾಡಿ, ಕ್ಷಮೆ ಕೋರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com