ಭಾರಿ ಮಳೆಗೆ ಉತ್ತರ ಭಾರತ ತತ್ತರ: ರಾಜಸ್ಥಾನದಲ್ಲಿ ಏಳು ಮಂದಿ ಸಾವು, ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ಮಂಗಳವಾರ ರಜೆ

ಉತ್ತರ ಭಾರತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತತ್ತರಿಸಿದೆ. ಮುಂಗಾರು ಮಳೆಯ ಆರ್ಭಟಕ್ಕೆ ಪೂರ್ವ ಮತ್ತು ಮಧ್ಯ ರಾಜಸ್ಥಾನದ ಹಲವಾರು ಭಾಗಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ದೆಹಲಿಯ ರಸ್ತೆಗಳು ನೀರಿನಿಂದ ತುಂಬಿರುವ ಚಿತ್ರ
ದೆಹಲಿಯ ರಸ್ತೆಗಳು ನೀರಿನಿಂದ ತುಂಬಿರುವ ಚಿತ್ರ

ನವದೆಹಲಿ: ಉತ್ತರ ಭಾರತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತತ್ತರಿಸಿದೆ. ಮುಂಗಾರು ಮಳೆಯ ಆರ್ಭಟಕ್ಕೆ ಪೂರ್ವ ಮತ್ತು ಮಧ್ಯ ರಾಜಸ್ಥಾನದ ಹಲವಾರು ಭಾಗಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ರೈಲು ಹಳಿಗಳು, ತಗ್ಗು ಪ್ರದೇಶದ ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಜನರು ತೀವ್ರ ತೊಂದರೆ ಎದುರಿಸಿದ್ದಾರೆ. ಭಾನುವಾರ ರಾತ್ರಿಯಿಂದ ಸುರಿದ ಮಳೆ ಏಳು ಜೀವಗಳನ್ನು ಬಲಿ ತೆಗೆದುಕೊಂಡಿವೆ.

ಮಂಗಳವಾರ ಸುಮಾರು ಹನ್ನೆರಡು ಜಿಲ್ಲೆಗಳಲ್ಲಿ ಹೆಚ್ಚು ತುಂತುರು ಮಳೆಯಾಗುವ ನಿರೀಕ್ಷೆಯಿದೆ. ಜೈಪುರದ ಮುರಳಿಪುರ ಪ್ರದೇಶದಲ್ಲಿ ತುಂಬಿ ಹರಿಯುತ್ತಿರುವ ಚರಂಡಿಯ ನೀರಿನ ರಭಸಕ್ಕೆ ಏಳು ವರ್ಷದ ಬಾಲಕ ಸೋಮವಾರ ಕೊಚ್ಚಿ ಹೋಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಅಜ್ಮೀರ್‌ನಲ್ಲಿ ಮೂರು, ನಾಗೌರ್‌ನಿಂದ ಇಬ್ಬರು ಮತ್ತು ಟೋಂಕ್‌ನಿಂದ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಿರೋಹಿ, ಅಜ್ಮೀರ್, ಪಾಲಿ ಮತ್ತು ಕರೌಲಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ ಆದರೆ ಪ್ರವಾಹ ಸಂಭವಿಸಿಲ್ಲ ಎಂದು ವಿಪತ್ತು ನಿರ್ವಹಣೆ ಮತ್ತು ಪರಿಹಾರ ಇಲಾಖೆಯ ಕಾರ್ಯದರ್ಶಿ ಪಿ ಸಿ ಕಿಶನ್ ತಿಳಿಸಿದ್ದಾರೆ.

ಇನ್ನೂ ಧಾರಾಕಾರ ಮಳೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯೂ ನಲುಗಿದ್ದು, ಮಂಗಳವಾರ ನರ್ಸರಿಯಿಂದ 5ನೇ ತರಗತಿಯವರೆಗಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರ ಕೂಡ ನಗರದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿತ್ತು. ಖಾಸಗಿ ಶಾಲೆಗಳೂ ಇದೇ ಸಲಹೆಯನ್ನು ಪಾಲಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಆರು ಮತ್ತು ಅದಕ್ಕಿಂತ ಹೆಚ್ಚಿನ ತರಗತಿಯವರಿಗೆ ತರಗತಿಗಳು ಎಂದಿನಂತೆ ನಡೆಯುತ್ತವೆ. ಸೋಮವಾರ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಮಾನ್ಯತೆ ಪಡೆದ ಎಲ್ಲಾ ಶಾಲೆಗಳು ಸಹ ಮಂಗಳವಾರ ಬಂದ್ ಆಗಲಿವೆ.

ಇಲಾಖೆ ಮುಖ್ಯಸ್ಥರು ಮತ್ತು ಶಿಕ್ಷಕರು ಶಾಲೆಗಳಿಗೆ ಬರಬೇಕು ಮತ್ತು ಎಲ್ಲಾ ಕಚೇರಿಗಳು ಸಹ ಕಾರ್ಯನಿರ್ವಹಿಸುತ್ತವೆ ಎಂದು ಆದೇಶದಲ್ಲಿ ಹೇಳಲಾಗಿದೆ.  ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ 153 ಮಿಮೀ ಮಳೆಯಾಗಿದ್ದು, ಸೋಮವಾರ ಬೆಳಗ್ಗೆ 8.30 ರವರೆಗೆ 107 ಮಿಮೀ ಮಳೆಯಾಗಿದೆ. ಸೋಮವಾರ ಬೆಳಗ್ಗೆ 8.30ರಿಂದ ಸಂಜೆ 5.30ರ ನಡುವೆ 2.9 ಮಿ.ಮೀ ಮಳೆ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com