'ವಿವೇಕ್ ಎಕ್ಸ್ ಪ್ರೆಸ್' ಬೋಗಿಯಲ್ಲಿ ಹೊಗೆ, ಚೈನ್ ಎಳೆದು ರೈಲು ನಿಲ್ಲಿಸಿದ ಪ್ರಯಾಣಿಕರು!

'ವಿವೇಕ್ ಎಕ್ಸ್ ಪ್ರೆಸ್' ರೈಲಿನ ಬೋಗಿಯೊಂದರಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಕೆಲಹೊತ್ತು ಆತಂಕಕ್ಕೊಳಗಾದ ಘಟನೆ ಮಂಗಳವಾರ ನಡೆದಿದೆ.
ವಿವೇಕ್ ಎಕ್ಸ್ ಪ್ರೆಸ್
ವಿವೇಕ್ ಎಕ್ಸ್ ಪ್ರೆಸ್

ಗಂಜಾಂ: 'ವಿವೇಕ್ ಎಕ್ಸ್ ಪ್ರೆಸ್' ರೈಲಿನ ಬೋಗಿಯೊಂದರಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಕೆಲಹೊತ್ತು ಆತಂಕಕ್ಕೊಳಗಾದ ಘಟನೆ ಮಂಗಳವಾರ ನಡೆದಿದೆ.

ಒಡಿಶಾದ ಗಂಜಾಂ ಜಿಲ್ಲೆಯ ಮೂಲಕ ತೆರಳುತ್ತಿದ್ದ ದಿಬ್ರುಗಢ-ಕನ್ಯಾಕುಮಾರಿ ವಿವೇಕ್ ಎಕ್ಸ್‌ಪ್ರೆಸ್ ರೈಲಿನ ಕೋಚ್ ವೊಂದರ ಕೆಳಗಡೆ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಭಯಭೀತರಾದ ಪ್ರಯಾಣಿಕರು ಬ್ರಹ್ಮಪುರ ರೈಲು ನಿಲ್ದಾಣದ ಬಳಿ ಚೆೈನ್ ಎಳೆದು ರೈಲನ್ನು ನಿಲ್ಲಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ನಿಲುತ್ತಿದ್ದಂತೆಯೇ ಪ್ರಯಾಣಿಕರು ದಾವಂತದಿಂದ ಕೆಳಗೆ ಇಳಿದಿದ್ದಾರೆ. ಕೂಡಲೇ ರೈಲ್ವೇ ಸಿಬ್ಬಂದಿ  ಸ್ಥಳಕ್ಕೆ ಆಗಮಿಸಿ ಎಸ್-10 ಬೋಗಿಯನ್ನು ಪರಿಶೀಲಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ. ಕೋಚ್‌ನ ಬ್ರೇಕ್-ಬೈಂಡಿಂಗ್ ಭಾಗದಲ್ಲಿ ಗೋಣಿಚೀಲ ಸಿಲುಕಿಕೊಂಡಿತ್ತು. ಚಕ್ರದಿಂದ ಗೋಣಿಚೀಲವನ್ನು ತೆಗೆದುಹಾಕಲಾಗಿದೆ. ಬೆಂಕಿ ನಿರೋಧಕ ಬಳಸಲಾಗಿದೆ. ರೈಲಿಗೆ ಯಾವುದೇ ಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

ಆದಾಗ್ಯೂ, ಬೋಗಿ ಬದಲಾಯಿಸುವಂತೆ ಪ್ರಯಾಣಿಕರು ಒತ್ತಾಯಿಸಿದರು. ಅದು ಸುರಕ್ಷಿತವಾಗಿದೆ ಎಂದು ಮನವರಿಕೆ ಮಾಡಿಕೊಟ್ಟ 50 ನಿಮಿಷಗಳ ನಂತರ ರೈಲು ಸ್ಥಳದಿಂದ ನಿರ್ಗಮಿಸಿತು ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com