ವರುಣನ ಆರ್ಭಟಕ್ಕೆ ಉತ್ತರ ಭಾರತ ತತ್ತರ: ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ, ಜುಲೈ 16 ರವರೆಗೆ ಶಾಲೆಗಳಿಗೆ ರಜೆ

ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ.
ಎನ್ ಡಿಆರ್ ಎಫ್ ರಕ್ಷಣಾ ಕಾರ್ಯಾಚರಣೆ
ಎನ್ ಡಿಆರ್ ಎಫ್ ರಕ್ಷಣಾ ಕಾರ್ಯಾಚರಣೆ
Updated on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ.

ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ ಮತ್ತು ಮನೆಗಳು, ಆಸ್ಪತ್ರೆಗಳು, ಪಾರಂಪರಿಕ ಕಟ್ಟಡಗಳು, ಸ್ಮಶಾನಗಳು, ಆಶ್ರಯ ಮನೆಗಳಿಗೆ ನೀರು ನುಗ್ಗಿದ್ದು ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆಗಳು ಜಲಾವೃತಗೊಂಡು ಬಸ್, ಲಾರಿ, ಕಾರುಗಳು ನೀರಿನಲ್ಲಿ ಮುಳುಗಡೆಯಾಗಿವೆ. ಹೆದ್ದಾರಿಯಲ್ಲಿ ಕಿಲೋ ಮೀಟರ್ ದೂರದವರೆಗೂ ಟ್ರಾಪಿಕ್ ಜಾಮ್ ಉಂಟಾಗಿದ್ದು, ಸಂಚಾರದಲ್ಲಿ ತೀವ್ರ ಅಡಚಣೆ ಉಂಟಾಗಿದೆ.

ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಎಲ್ಲಾ ಮುನ್ಸಿಪಲ್ ಕಾರ್ಪೊರೇಷನ್ ಶಾಲೆಗಳಿಗೆ ಜುಲೈ 16 ರವರೆಗೆ ರಜೆ ಘೋಷಿಸಲಾಗಿದೆ.  ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿದ ನಿರ್ದೇಶನಗಳಿಗೆ ಅನುಸಾರವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಜುಲೈ 16 ರವರೆಗೆ ಮುಚ್ಚಲಾಗುವುದು ಎಂದು ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆ ದೃಷ್ಟಿಯಿಂದ ಕೆಂಪು ಕೋಟೆಗೆ ಜುಲೈ 14 ರವರೆಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. 

ಈ ಮಧ್ಯೆ ಯಮುನಾ ನದಿಯ ನೀರಿನ ಮಟ್ಟ ಸ್ಥಿರವಾಗಿದ್ದು, ಇಂದು ರಾತ್ರಿ ಕಡಿಮೆಯಾಗಲು ಪ್ರಾರಂಭಿಸುತ್ತದೆ ಎಂದು ಕೇಂದ್ರ ಜಲ ಆಯೋಗದ ಹಿರಿಯ ಅಧಿಕಾರಿ ಗುರುವಾರ ತಿಳಿಸಿದ್ದಾರೆ. ಫ್ರಾನ್ಸ್ ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವ ಸಾಧ್ಯತೆಯಿದ್ದು, ಲೆಫ್ಟಿನೆಂಟ್ ಗೌವರ್ನರ್ ಅವರೊಂದಿಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಗೃಹ ಸಚಿವಾಲಯದ ಕಚೇರಿ ತಿಳಿಸಿದೆ.

ಹಿಮಾಚಲ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯು ಮನಾಲಿಯ ಭಾಗಗಳಲ್ಲಿ ಹಾನಿಯನ್ನುಂಟುಮಾಡಿದೆ.  ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರು ಐಎಎಫ್ ಹೆಲಿಕಾಪ್ಟರ್‌ನಲ್ಲಿ ಹಲವಾರು ಪ್ರವಾಸಿಗರನ್ನು ಸಾಂಗ್ಲಾದಿಂದ ಶಿಮ್ಲಾಕ್ಕೆ ಕರೆತಂದರು.

ಇನ್ನೂ ಅಸ್ಸಾಂನಲ್ಲಿಯೂ ಧಾರಾಕಾರ ಮಳೆಯಿಂದಾಗಿ ಬ್ರಹ್ಮಪುತ್ರ ನದಿಯ ನೀರಿನ ಮಟ್ಟ ಹೆಚ್ಚಾದ ಕಾರಣ ದಿಬ್ರುಗಢದ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಜನರ ಮನೆಗಳಿಗೆ ನೀರು ನುಗ್ಗಿದೆ. ಪಶ್ಚಿಮ ಬಂಗಾಳದಲ್ಲಿ ಕಲ್ಜಾನಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮೆಚ್ಪಾರಾ ಗ್ರಾಮದಲ್ಲಿ ಪ್ರವಾಹ ಉಂಟಾಗಿ 72 ಗ್ರಾಮಸ್ಥರನ್ನು ಭಾರತೀಯ ಸೇನೆ ಸ್ಥಳಾಂತರಿಸಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com