ಧಾರಾವಿ
ಧಾರಾವಿ

ಮಹಾರಾಷ್ಟ್ರ ಸರ್ಕಾರದಿಂದ ಮೋದಿ ಆಪ್ತ ಅದಾನಿಗೆ 'ಧಾರಾವಿ' ಗಿಫ್ಟ್: ಕಾಂಗ್ರೆಸ್ ವಾಗ್ದಾಳಿ

ಮಹಾರಾಷ್ಟ್ರ ಸರ್ಕಾರ ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ಅಧಿಕೃತವಾಗಿ ಅದಾನಿ ಗ್ರೂಪ್ ಸಂಸ್ಥೆಗೆ ನೀಡಿದ್ದಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

ನವದೆಹಲಿ: ಮಹಾರಾಷ್ಟ್ರ ಸರ್ಕಾರ ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ಅಧಿಕೃತವಾಗಿ ಅದಾನಿ ಗ್ರೂಪ್ ಸಂಸ್ಥೆಗೆ ನೀಡಿದ್ದಕ್ಕೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಮಹಾ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಆಪ್ತನಿಗೆ ಧಾರಾವಿ ಯೋಜನೆಯನ್ನು ಗಿಫ್ಟ್ ಆಗಿ ನೀಡಿದೆ. ಬಿಜೆಪಿ ರಾಜ್ಯ ಸರ್ಕಾರಗಳನ್ನು ಮೋದಿ ಆಪ್ತರಿಗೆ ಎಟಿಎಂ ಯಂತ್ರಗಳಾಗಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಹಾರಾಷ್ಟ್ರ ಸರ್ಕಾರದ ವಸತಿ ಅಭಿವೃದ್ಧಿ ಇಲಾಖೆಯು ಗುರುವಾರ ಬಿಡುಗಡೆ ಮಾಡಿದ ನಿರ್ಣಯದಲ್ಲಿ, ಗೌತಮ್ ಅದಾನಿ ನೇತೃತ್ವದ ಅದಾನಿ ಪ್ರಾಪರ್ಟೀಸ್ ಏಷ್ಯಾದ ಎರಡನೇ ಅತಿದೊಡ್ಡ ಸ್ಲಂ ಕಾಲೋನಿ ಧಾರಾವಿಯ ನವೀಕರಣದ ಬಿಡ್ ಅನ್ನು ಗೆದ್ದಿದ್ದು, ಇದಕ್ಕೆ ಸಂಪುಟ ಅನುಮೋದನೆ ನೀಡಿದೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ವಸತಿ ಇಲಾಖೆಯನ್ನು ಹಸ್ತಾಂತರಿಸುವ ಮುನ್ನ 5,069 ಕೋಟಿ ರೂ.ಗಳ ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ಅಧಿಕೃತವಾಗಿ ಅನುಮೋದಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಯೋಜನೆಯನ್ನು ಮೂಲತಃ ಬೇರೆ ಬಿಡ್ಡರ್‌ಗೆ ನೀಡಲಾಗಿತ್ತು. ಆದರೆ ವಿವಾದದಿಂದಾಗಿ ಮೂಲ ಟೆಂಡರ್ ಅನ್ನು ರದ್ದುಗೊಳಿಸಿ ನಂತರ ಶಿಂದೆ-ಫಡ್ನವಿಸ್ ಸರ್ಕಾರ ಪಿಎಂ ಮೋದಿ ಅವರ ಆಪ್ತರಿಗೆ ನೀಡಲು ಟೆಂಡರ್ ಷರತ್ತುಗಳನ್ನು ಬದಲಾಯಿಸಲಾಗಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.

"ಹಿಂದಿನ ಬಿಡ್ ವಿಜೇತರನ್ನು ಹೊರಗಿಡಲು ಕನಿಷ್ಠ ನಿವ್ವಳ ಮೌಲ್ಯವನ್ನು 10,000 ಕೋಟಿ ರೂ.ಗಳಿಂದ 20,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಮತ್ತು ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಅದಾನಿ ಗ್ರೂಪ್‌ನ ಹಾದಿಯನ್ನು ಸುಗಮಗೊಳಿಸಲು ಕಂತುಗಳಲ್ಲಿ ಹಣ ಪಾವತಿಗೆ ಅನುಮತಿಸಲಾಗಿದೆ" ಎಂದು ರಮೇಶ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com