
ಅಹಮದಾಬಾದ್: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಗುಜರಾತ್‌ನ ಬುಡಕಟ್ಟು ಪ್ರದೇಶದಲ್ಲಿ ಭಾನುವಾರ ಬಂದ್ ಗೆ ಕರೆ ನೀಡಲಾಗಿದೆ ಎಂದು ಬುಡಕಟ್ಟು ಮುಖಂಡರೊಬ್ಬರು ಶನಿವಾರ ತಿಳಿಸಿದ್ದಾರೆ.
ಈಶಾನ್ಯ ರಾಜ್ಯದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಆಡಳಿತಾರೂಢ ಬಿಜೆಪಿಯ "ವೈಫಲ್ಯ" ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಈ ಬಂದ್‌ಗೆ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.
ಆದಿವಾಸಿ ಏಕತಾ ಮಂಚ್ ಸೇರಿದಂತೆ ಹಲವು ಬುಡಕಟ್ಟು ಸಂಘಟನೆಗಳು ಗುಜರಾತ್‌ನ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಿವೆ.
"ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಮಧ್ಯಪ್ರದೇಶ ಮೂತ್ರ ವಿಸರ್ಜನೆ ಘಟನೆ ಮತ್ತು ಗುಜರಾತ್‌ನಲ್ಲಿ ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬುಡಕಟ್ಟು ಸಮುದಾಯ ಭಾನುವಾರ ಗುಜರಾತ್‌ನ ಬುಡಕಟ್ಟು ಪ್ರದೇಶದಲ್ಲಿ ಬಂದ್ ಆಚರಿಸಲಿದೆ" ಎಂದು ಇತ್ತೀಚೆಗೆ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ರಾಜೀನಾಮೆ ನೀಡಿದ ಬುಡಕಟ್ಟು ಮುಖಂಡ ಪ್ರಫುಲ್ ವಾಸವ ಅವರು ತಿಳಿಸಿದ್ದಾರೆ.
ಯಾವುದೇ ಒಂದು ಸಂಘಟನೆ ಅಥವಾ ರಾಜಕೀಯ ಪಕ್ಷದ ಬ್ಯಾನರ್ ಅಡಿಯಲ್ಲಿ ಬಂದ್‌ಗೆ ಕರೆ ನೀಡಿಲ್ಲ. ಆದರೆ ವಿವಿಧ ಬುಡಕಟ್ಟು ಮತ್ತು ಇತರ ಸಾಮಾಜಿಕ-ರಾಜಕೀಯ ಸಂಘಟನೆಗಳ ಒಮ್ಮತದೊಂದಿಗೆ ಬಂದ್ ಗೆ ಕರೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮಣಿಪುರದಲ್ಲಿ ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಹಲವು ಬುಡಕಟ್ಟು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಬಂದ್‌ಗೆ ಬೆಂಬಲ ನೀಡುವಂತೆ ಕಾಂಗ್ರೆಸ್‌ಗೆ ಮನವಿ ಮಾಡಲಾಗಿದೆ ಮತ್ತು ಪಕ್ಷವು ಸಂಪೂರ್ಣವಾಗಿ ಬೆಂಬಲಿಸಲು ನಿರ್ಧರಿಸಿದೆ. ಮಣಿಪುರದ ಪರಿಸ್ಥಿತಿಗೆ ಬಿಜೆಪಿಯೇ ನೇರ ಹೊಣೆಯಾಗಿದೆ ಎಂದು ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಹೇಳಿದ್ದಾರೆ.
Advertisement