ಮಣಿಪುರದ ಗುಂಗಿನಲ್ಲಿ ರಾಜಸ್ಥಾನ, ಪಶ್ಚಿಮ ಬಂಗಾಳ ಮರೆಯಬೇಡಿ: ಬಿಜೆಪಿ

ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಕೇಂದ್ರವಾಗಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಗೆ ಮುಂದಾಗಿರುವ ವಿಪಕ್ಷಗಳಿಗೆ ಬಿಜೆಪಿ ತಿರುಗೇಟು ನೀಡಿದ್ದು, ಮಣಿಪುರದ ಗುಂಗಿನಲ್ಲಿ ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿನ ಕೃತ್ಯಗಳನ್ನು ಮರೆಯಬೇಡಿ ಎಂದು ಕಿಡಿಕಾರಿದೆ.
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ನವದೆಹಲಿ: ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಕೇಂದ್ರವಾಗಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಗೆ ಮುಂದಾಗಿರುವ ವಿಪಕ್ಷಗಳಿಗೆ ಬಿಜೆಪಿ ತಿರುಗೇಟು ನೀಡಿದ್ದು, ಮಣಿಪುರದ ಗುಂಗಿನಲ್ಲಿ ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿನ ಕೃತ್ಯಗಳನ್ನು ಮರೆಯಬೇಡಿ ಎಂದು ಕಿಡಿಕಾರಿದೆ.

ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರವಾಗಿ ವಿಪಕ್ಷಗಳು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವಂತೆಯೇ ಇತ್ತ ಅದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಬಿಜೆಪಿ, ಮಣಿಪುರದ ಗುಂಗಿನಲ್ಲಿ ರಾಜಸ್ಥಾನ, ಪಶ್ಚಿಮ ಬಂಗಾಳ ಮರೆಯಬೇಡಿ ಎಂದು ಹೇಳಿದೆ. 'ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಾದ ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಬಿಹಾರಗಳಲ್ಲಿ ಮಹಿಳೆಯರ ವಿರುದ್ಧದ ಘೋರ ಅಪರಾಧಗಳ ದೊಡ್ಡ ಪಟ್ಟಿಯೇ ಇದೆ. ಆದರೆ ಮಣಿಪುರ ಘಟನೆಯ ಮೇಲೆ ರಾಜಕೀಯ ಮಾಡಲಾಗುತ್ತಿದೆ ಎಂದು ಶನಿವಾರ ಆರೋಪಿಸಿದೆ.

ಇಲ್ಲಿನ ಬಿಜೆಪಿ ಪ್ರಧಾನ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ರಾಜಸ್ಥಾನ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ದಾಖಲಾದ ಮಹಿಳೆಯರ ಮೇಲಿನ ಕೆಲವು ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಮಹಿಳೆಯರ ವಿರುದ್ಧದ ಯಾವುದೇ ಅಪರಾಧವು ಅಪರಾಧವೇ.. ಈ ಬಗ್ಗೆ ಸರ್ಕಾರದಲ್ಲೂ ಆಕ್ರೋಶವಿದೆ.. ಆದರೆ ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿದೆ. ಒಂದು ವರ್ಷದಲ್ಲಿ ಶೇ.22 ರಷ್ಟು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ರಾಜಸ್ಥಾನದಲ್ಲಿ ನಡೆದಿವೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜಸ್ಥಾನದಲ್ಲಿ ಮಹಿಳೆಯರ ವಿರುದ್ಧದ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಒಟ್ಟು 33,000 ಪ್ರಕರಣಗಳು ದಾಖಲಾಗಿವೆ ಎಂದು ಅನುರಾಗ್ ಠಾಕೂರ್ ಹೇಳಿದರು.

ಅಂತೆಯೇ ಯುಪಿಎ ಅಧಿಕಾರದಲ್ಲಿದ್ದಾಗ ಮಣಿಪುರದಲ್ಲಿ ಆರು ತಿಂಗಳ ಸುದೀರ್ಘ ಮುಷ್ಕರ ನಡೆಸಲಾಗಿತ್ತು. ಈಗ ಮಣಿಪುರದಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಖುದ್ದು ಗೃಹ ಸಚಿವ ಅಮಿತ್ ಶಾ ಅವರೇ ನಾಲ್ಕು ದಿನ ಅಲ್ಲಿದ್ದರು. ಆದರೆ ವಿಪಕ್ಷಗಳೇಕೆ ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ.. ಅವರು ಚರ್ಚೆಯಿಂದ ದೂರ ಸರಿಯಲು ಕಾರಣವೇನು ಎಂದು ನಾನು ಪ್ರತಿಪಕ್ಷಗಳನ್ನು ಕೇಳಲು ಬಯಸುತ್ತೇನೆ. ವಿರೋಧ ಪಕ್ಷದ ನಾಯಕರೊಬ್ಬರನ್ನು ಅನರ್ಹಗೊಳಿಸಿರುವುದು ಇದಕ್ಕೆ ಕಾರಣವೇ? ಮತ್ತು ಸಂಸತ್ತು ಕಾರ್ಯನಿರ್ವಹಿಸುವುದು ನಿಮಗೆ ಇಷ್ಟವಿಲ್ಲವೇ? ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳ ಬಗ್ಗೆ (ರಾಜಸ್ಥಾನ ಸಚಿವ) ಶಾಂತಿ ಧರಿವಾಲ್ ಅವರ ಹೇಳಿಕೆಗಳ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಏಕೆ ಮೌನವಾಗಿದ್ದಾರೆ? ಎಂದು ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com