'ಮಣಿಪುರ ಭೇಟಿಗೆ ಸರ್ಕಾರದಿಂದಲೇ ಅಡ್ಡಿ': ದೆಹಲಿ ಮಹಿಳಾ ಆಯೋಗ ಮುಖ್ಯಸ್ಥರ ಗಂಭೀರ ಆರೋಪ

ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ನಡೆದ ಮಣಿಪುರಕ್ಕೆ ಭೇಟಿ ನೀಡುವ ತಮ್ಮ ಯೋಜನೆಗೆ ಸರ್ಕಾರವೇ ಅಡ್ಡಿ ಪಡಿಸುತ್ತಿದೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷ ಸ್ವಾತಿ ಮಲಿವಾಲ್
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷ ಸ್ವಾತಿ ಮಲಿವಾಲ್

ನವದೆಹಲಿ: ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ನಡೆದ ಮಣಿಪುರಕ್ಕೆ ಭೇಟಿ ನೀಡುವ ತಮ್ಮ ಯೋಜನೆಗೆ ಸರ್ಕಾರವೇ ಅಡ್ಡಿ ಪಡಿಸುತ್ತಿದೆ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರೊಂದಿಗೆ ಸಂವಾದ ನಡೆಸಲು ಮಣಿಪುರ ರಾಜ್ಯಕ್ಕೆ ಭೇಟಿ ನೀಡಲು ಮಣಿಪುರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಶನಿವಾರ ಆರೋಪಿಸಿದ್ದಾರೆ.

ಮಲಿವಾಲ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದು, ಮಣಿಪುರ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.  ಜುಲೈ 23 ರಂದು ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ ಸ್ವಾತಿ ಮಲಿವಾಲ್ ಭೇಟಿ ನೀಡಬೇಕಿತ್ತು. ಶುಕ್ರವಾರ ಅವರು ಮಣಿಪುರದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಮಣಿಪುರ ಭೇಟಿ ಕುರಿತು ಪತ್ರ ಬರೆದು ಅನುಮತಿ ಕೋರಿದ್ದರು. ಮಲಿವಾಲ್ ಜುಲೈ 30ರವರೆಗೆ ರಾಜ್ಯದಲ್ಲಿ ಇದ್ದು ಪರಿಸ್ಥಿತಿ ಅವಲೋಕಿಸಲು ಬಯಸಿದ್ದರು.

ಮಣಿಪುರ ಡಿಜಿಪಿಗೆ ಬರೆದ ಪತ್ರದಲ್ಲಿ ಅವರು ಜುಲೈ 23 ರಂದು ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಸತ್ಯಶೋಧನಾ ವರದಿಯನ್ನು ಸಲ್ಲಿಸಲು ಯೋಜಿಸಿದ್ದೇವೆ ಎಂದು ಹೇಳಿಕೊಂಡಿದ್ದರು. ಆದರೆ ಅಂದು ತಮ್ಮ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸರ್ಕಾರ ಇದೀಗ ಯೂಟರ್ನ್ ಹೊಡೆದಿದೆ. ಇದ್ದಕ್ಕಿದ್ದಂತೆ ನನಗೆ ಅನುಮತಿ ನಿರಾಕರಿಸಿದೆ.

ಇದು ಆಘಾತಕಾರಿ ಮತ್ತು ಅಸಂಬದ್ಧವಾಗಿದೆ. ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರನ್ನು ನಾನು ಏಕೆ ಭೇಟಿಯಾಗಬಾರದು? ಅವರೊಂದಿಗೆ ಚರ್ಚೆ ನಡೆಸಲು ನಾನು ಈಗಾಗಲೇ ನನ್ನ ಟಿಕೆಟ್‌ಗಳನ್ನು ಬುಕ್ ಮಾಡಿದ್ದೇನೆ. ನನ್ನನ್ನು ತಡೆಯಲು ಪ್ರಯತ್ನಿಸುತ್ತಿರುವುದೇಕೆ?' ಅವರು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ರಾಜ್ಯ ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com