ಗಗನಸಖಿ ಆತ್ಮಹತ್ಯೆ ಪ್ರಕರಣ: ಹರ್ಯಾಣ ಮಾಜಿ ಸಚಿವ ಕಂಡಾ ನಿರ್ದೋಷಿ ಎಂದ ದೆಹಲಿ ಕೋರ್ಟ್

2012 ಗಗನಸಖಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಹರ್ಯಾಣ ಮಾಜಿ ಸಚಿವ ಗೋಪಾಲ್ ಗೋಯಲ್ ಕಂಡಾ ಅವರನ್ನು ನಿರ್ಧೋಷಿ ಎಂದು ತೀರ್ಪು ನೀಡಿದೆ.
ಹರಿಯಾಣ ಮಾಜಿ ಸಚಿವ ಗೋಪಾಲ್ ಗೋಯಲ್ ಕಂಡಾ
ಹರಿಯಾಣ ಮಾಜಿ ಸಚಿವ ಗೋಪಾಲ್ ಗೋಯಲ್ ಕಂಡಾ

ನವದೆಹಲಿ: 2012 ಗಗನಸಖಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಹರ್ಯಾಣ ಮಾಜಿ ಸಚಿವ ಗೋಪಾಲ್ ಗೋಯಲ್ ಕಂಡಾ ಅವರನ್ನು ನಿರ್ಧೋಷಿ ಎಂದು ತೀರ್ಪು ನೀಡಿದೆ.

2012ರಲ್ಲಿ ನಡೆದಿದ್ದ ಗಗನ ಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಂಡಾ ನಿರ್ದೋಷಿ ಎಂದು ದೆಹಲಿ ನ್ಯಾಯಾಲಯ ಮಂಗಳವಾರ ಆದೇಶಿಸಿದ್ದು, ಗೀತಿಕಾ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಗೋಪಾಲ್ ಕಂಡಾ ಮೇಲಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಕಾಸ್ ಧುಲ್‌ ಅವರು ಗೋಪಾಲ್ ಕಂಡಾ ಹಾಗೂ ಮತ್ತೊಬ್ಬ ಆರೋಪಿ ಅರುಣಾ ಛಡ್ಡಾ ಅವರನ್ನು ನಿರ್ದೋಷಿ ಎಂದು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಕಂಡಾ ಹಾಗೂ ಛಡ್ಡಾ ವಿರುದ್ಧ (ಆತ್ಮಹತ್ಯೆಗೆ ಪ್ರಚೋದನೆ), 506 (ಕ್ರಿಮಿನಲ್ ಬೆದರಿಕೆ), 201 (ಸಾಕ್ಷ್ಯ ನಾಶ), 120 ಬಿ (ಅಪರಾಧದ ಪಿತೂರಿ) ಮತ್ತು 466 (ನಕಲಿ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು. ಇದಲ್ಲದೆ ಪಿತೂರಿ ಹಾಗೂ ಇನ್ನಿತರ ಆರೋಪಗಳಿದ್ದವು. ಇದರೊಂದಿಗೆ ಅತ್ಯಾಚಾರ ಹಾಗೂ ಅಸ್ವಾಭಾವಿಕ ಲೈಂಗಿಕಕ್ರಿಯೆ ನಡೆಸಿದ ಆರೋಪವೂ ಸೇರಿಸಲಾಗಿತ್ತು. ಆದರೆ ನಂತರ ಈ ಎರಡನ್ನು ನ್ಯಾಯಾಲಯವು ವಿಚಾರಣೆಯಿಂದ ಕೈಬಿಟ್ಟಿತು. 

ಗೀತಿಕಾ ಶರ್ಮಾ ಅವರು ಕಂಡಾ ಅವರು ನಡೆಸುತ್ತಿದ್ದ ಎಂಎಲ್‌ಡಿಆರ್‌ ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿದ್ದರು. 2012ರ ಆ. 5ರಂದು  ದೆಹಲಿ ವಾಯವ್ಯ ಭಾಗದಲ್ಲಿರುವ ಅಶೋಕ ವಿಹಾರದಲ್ಲಿರುವ ಮನೆಯಲ್ಲಿ ಗೀತಿಕಾ ಅವರ ಮೃತದೇಹ ಪತ್ತೆಯಾಗಿತ್ತು. ಆ. 4ರಂದು ಗೀತಿಕಾ ಅವರು ಬರೆದಿಟ್ಟಿದ್ದರು ಎನ್ನಲಾದ ಮರಣ ಪತ್ರದಲ್ಲಿ ಕಂಡಾ ಹಾಗೂ ಛಡ್ಡಾ ಅವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಬರೆಯಲಾಗಿತ್ತು.

ಗೃಹ ಇಲಾಖೆ ರಾಜ್ಯ ಸಚಿವರಾಗಿದ್ದ ಕಂಡಾ ಅವರು ಈ ಪ್ರಕರಣದ ನಂತರ ರಾಜೀನಾಮೆ ನೀಡಿದ್ದರು. 2009ರ ವಿಧಾನಸಭಾ ಚುನಾವಣೆಯಲ್ಲಿ ಸಿರ್ಸಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಂಡಾ ಸ್ಪರ್ಧಿಸಿ ಗೆದ್ದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com