2023ರಲ್ಲಿಯೂ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಸಿಗುವಂತಾಗಲಿ: 2019ರ ಮೋದಿ ಹೇಳಿಕೆ ವಿಡಿಯೋ ವೈರಲ್

ಪ್ರತಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಂಸತ್ತಿನಲ್ಲಿ ಮಂಡನೆ ಮಾಡಿರುವ ನಡುವಲ್ಲೇ 2019ರಲ್ಲಿ ಮೋದಿಯವರು ಪ್ರತಿಪಕ್ಷಗಳ ಕುರಿತು ಲೋಕಸಭೆಯಲ್ಲಿ ಭಾಷಣ ಮಾಡಿದ್ದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಪ್ರತಿಪಕ್ಷಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಂಸತ್ತಿನಲ್ಲಿ ಮಂಡನೆ ಮಾಡಿರುವ ನಡುವಲ್ಲೇ 2019ರಲ್ಲಿ ಮೋದಿಯವರು ಪ್ರತಿಪಕ್ಷಗಳ ಕುರಿತು ಲೋಕಸಭೆಯಲ್ಲಿ ಭಾಷಣ ಮಾಡಿದ್ದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಮೊದಲ ಅವಿಶ್ವಾಸ ನಿರ್ಣಯವನ್ನು ಜುಲೈ 20, 2019 ರಂದು ಮಂಡಿಸಲಾಗಿತ್ತು.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಅವಿಶ್ವಾಸ ನಿರ್ಣಯವನ್ನು 195 ಮತಗಳಿಂದ ಗೆಲುವು ಕಂಡಿತ್ತು. 135 ಸದಸ್ಯರು ಬೆಂಬಲಿಸಿದರೆ, 330 ಸಂಸದರು ಅದನ್ನು ತಿರಸ್ಕರಿಸಿದ್ದರು.

ಈ ಸಂದರ್ಭದಲ್ಲಿ ಮೋದಿಯವರು ಪ್ರತಿಪಕ್ಷಗಳ ಕುರಿತು ಲೋಕಸಭೆಯಲ್ಲಿ ಮಾತನಾಡಿದ್ದ ಭಾಷಣ ವಿಡಿಯೋ ವೈರಲ್ ಆಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಯಾವುದರಲ್ಲಿಯೂ ವಿಶ್ವಾಸವಿಲ್ಲ. ನಿಮ್ಮ ಮಿತ್ರಪಕ್ಷಗಳನ್ನಾದರೂ ನಂಬಿ. ಮೋದಿ ಹಠಾವೋ ಎಂಬ ಘೋಷಣೆ ಕೇಳಿಬರುತ್ತಿದೆ. ಓರ್ವ ಮೋದಿಯನ್ನು ಹಿಂದಿಕ್ಕಲು ಎಲ್ಲಾ ವಿರೋಧಿ ಬಣಗಳು ಒಂದಾಗಿವೆ. ಪ್ರಧಾನಿ ಕುರ್ಚಿ ಏರಲು ರಾಹುಲ್ ಗಾಂಧಿ ಆತುರರಾಗಿದ್ದಾರೆ. ಕೆಲವರು ತಮ್ಮನ್ನು ಶಿವ ಭಕ್ತರು ಎಂದು ಹೇಳಿಕೊಳ್ಳುತ್ತಾರೆ. ನಾನು ಕೂಡಾ ಶಿವನ ಭಕ್ತ. ಶಿವನು 2023ರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಇದೇ ರೀತಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಅವಕಾಶ ನೀಡಲಿ ಎಂದು ಕೇಳಿಕೊಳ್ಳುತ್ತೇನೆ' ಎಂದು ಲೇವಡಿ ಮಾಡಿದ್ದರು.

ತನ್ನ ದುರಹಂಕಾರದಿಂದ 2014 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಸಂಖ್ಯೆ ಒಂದೇ ಬಾರಿಗೆ 400ರಿಂದ 40ಕ್ಕೆ ಕುಸಿದಿದೆ. ಆದರೆ, ಸೇವಾ ಮನೋಭಾವದಿಂದ ಬಿಜೆಪಿ 2 ಸ್ಥಾನಗಳಿಂದ ಸ್ವಂತ ಬಲದಿಂದ ಅಧಿಕಾರಕ್ಕೆ ಏರಿದೆ ಎಂದು ಹೇಳಿದ್ದರು. ಇದರ ವಿಡಿಯೋ ವೈರಲ್ ಆಗಿದೆ.

ಏನಿದು ಅವಿಶ್ವಾಸ ನಿರ್ಣಯ ಮಂಡನೆ?
ಅವಿಶ್ವಾಸ ನಿರ್ಣಯವನ್ನು ಲೋಕಸಭೆಯಲ್ಲಿ ಮತ್ತು ಸದನದ ಯಾವುದೇ ಸದಸ್ಯರು ಮಾತ್ರ ಮಂಡಿಸಬಹುದು. ಸದಸ್ಯರು ಬೆಳಗ್ಗೆ 10 ಗಂಟೆಗೆ ಮೊದಲು ಲಿಖಿತ ಸೂಚನೆಯನ್ನು ನೀಡಬೇಕು. ಕನಿಷ್ಠ 50 ಸದಸ್ಯರು ಪ್ರಸ್ತಾವನೆಯನ್ನು ಅಂಗೀಕರಿಸಬೇಕು. ನಂತರ ಸಭಾಧ್ಯಕ್ಷರು ಪ್ರಸ್ತಾವನೆಯ ಚರ್ಚೆಯ ದಿನಾಂಕವನ್ನು ನಿರ್ಧರಿಸುತ್ತಾರೆ. ಲೋಕಸಭೆಯಲ್ಲಿ ಬಹುಮತದ ಬೆಂಬಲವನ್ನು ಹೊಂದಿರುವಾಗ ಮಾತ್ರ ಸರ್ಕಾರವು ಕಾರ್ಯನಿರ್ವಹಿಸುತ್ತದೆ. ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಅಧಿಕಾರದಲ್ಲಿರುವ ಪಕ್ಷವು ರಾಜೀನಾಮೆ ನೀಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com