'ವಿದೇಶಕ್ಕೆ ಹೋಗುವಾಗ ಜೊತೆಗೆ ಆಹಾರ ಒಯ್ಯುತ್ತೇನೆ, ವೆಜ್-ನಾನ್ ವೆಜ್ ಗೆ ಒಂದೇ ಸ್ಪೂನ್ ಬಳಸಿದರೆ ಎಂಬ ಆತಂಕ ನನಗೆ': ಟ್ರೋಲ್ ಆದ ಸುಧಾ ಮೂರ್ತಿ!

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ, ಲೇಖಕಿ, ಸಮಾಜಸೇವಕಿಯಾಗಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿಯ ತಾಯಿಯಾಗಿ ಗುರುತಿಸಿಕೊಂಡಿರುವ ಸುಧಾ ಮೂರ್ತಿಯವರು ಇತ್ತೀಚೆಗೆ ಲಂಡನ್ ನಲ್ಲಿ ವಲಸೆ ಅಧಿಕಾರಿ ಮುಂದೆ '10 ಡೌನಿಂಗ್ ಸ್ಟ್ರೀಟ್' ಎಂದು ವಿಳಾಸ ಹೇಳಿದಾಗ ಅವರು ಅಚ್ಚರಿಯಿಂದ ತಮ್ಮನ್ನು ನೋಡಿದರು ಎಂದು ಹೇಳಿದ್ದು ಸುದ್ದಿಯಾಗಿತ್ತು.
ಸುಧಾ ಮೂರ್ತಿ
ಸುಧಾ ಮೂರ್ತಿ

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ, ಲೇಖಕಿ, ಸಮಾಜಸೇವಕಿಯಾಗಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿಯ ತಾಯಿಯಾಗಿ ಗುರುತಿಸಿಕೊಂಡಿರುವ ಸುಧಾ ಮೂರ್ತಿಯವರು ಇತ್ತೀಚೆಗೆ ಲಂಡನ್ ನಲ್ಲಿ ವಲಸೆ ಅಧಿಕಾರಿ ಮುಂದೆ '10 ಡೌನಿಂಗ್ ಸ್ಟ್ರೀಟ್' ಎಂದು ವಿಳಾಸ ಹೇಳಿದಾಗ ಅವರು ಅಚ್ಚರಿಯಿಂದ ತಮ್ಮನ್ನು ನೋಡಿದರು ಎಂದು ಹೇಳಿದ್ದು ಸುದ್ದಿಯಾಗಿತ್ತು.

ಇದೀಗ ಸುಧಾಮೂರ್ತಿಯವರು ಆಡಿದ ಮತ್ತೊಂದು ಮಾತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ. ತಾವು ವಿದೇಶಕ್ಕೆ ಹೋಗುವಾಗ ತಮಗೆ ಬೇಕಾದ ಊಟ ತಿಂಡಿಯನ್ನು ರೆಡಿ ಮಾಡಿಕೊಂಡು ಬ್ಯಾಗ್ ನಲ್ಲಿ ಹಾಕಿಕೊಂಡು ಹೋಗುತ್ತೇನೆ ಎಂದು ಹೇಳಿರುವ ಮಾತು ಟ್ರೋಲ್ ಆಗುತ್ತಿದೆ. 

ಸುಧಾ ಮೂರ್ತಿಯವರು ಇತ್ತೀಚೆಗೆ ಟಿವಿ ನಿರೂಪಕ ಕುನಲ್ ವಿಜಯಕುಮಾರ್ ಅವರ Khane Mein kya hai episode (ಆಹಾರ ಏನಿದೆ?) ಎಂಬ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಮಾತನಾಡುತ್ತಾ 'ನಾನು ಮಾಡುವ ಕೆಲಸದಲ್ಲಿ ಹೊಸದನ್ನು, ಸಾಹಸವನ್ನು ಹುಡುಕಲು ಪ್ರಯತ್ನಿಸುತ್ತಿರುತ್ತೇನೆ, ಆದರೆ ತಿನ್ನುವ ಆಹಾರದಲ್ಲಲ್ಲ. ನಾನು ಹೊರದೇಶಕ್ಕೆ ಹೋಗುವಾಗಲೆಲ್ಲ ಆಹಾರದ ಬ್ಯಾಗ್ ಮತ್ತು ಅಡುಗೆಗೆ ಬೇಕಾದ ಸರಳ ಸುಲಭ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇನೆ. ನಾನು ಶುದ್ಧ ಸಸ್ಯಾಹಾರಿ, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಕೂಡ ಸೇವಿಸುವುದಿಲ್ಲ. ಹೊರಗೆ ಹೋದರೆ ಶುದ್ಧ ಸಸ್ಯಾಹಾರಿ ಹೊಟೇಲ್ ನ್ನು ಹುಡುಕುತ್ತೇನೆ, ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಗಳಿಗೆ ಒಂದೇ ಸ್ಪೂನ್ ಬಳಸಿದರೆ ಎಂಬ ಆತಂಕ ನನಗೆ, ಹೀಗಾಗಿ ವಿದೇಶಕ್ಕೆ ಹೋಗುವಾಗ ಸ್ಪೂನ್ ಕೂಡ ಜೊತೆಗೆ ಒಯ್ಯುತ್ತೇನೆ, ರವೆ ಹುರಿದು ಕೊಂಡೊಯ್ಯುತ್ತೇನೆ, ಬಿಸಿನೀರು ಜೊತೆಗೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದರು. 

ನಾನು ಮೊದಲು ನನ್ನ ಅಜ್ಜಿಯನ್ನು ಅವರು ಹೊರಗಡೆ ಯಾವುದೇ ಆಹಾರ ತಿನ್ನದಿರುವುದಕ್ಕೆ ತಮಾಷೆ ಮಾಡುತ್ತಿದ್ದೆ, ಈಗ ಅದನ್ನು ನಾನು ಅನುಸರಿಸುತ್ತಿದ್ದೇನೆ ಎಂದು ಕೂಡ ಹೇಳಿದ್ದರು.

ಸುಧಾ ಮೂರ್ತಿಯವರ ಈ ಮಾತುಗಳು ಭಾರೀ ಟ್ರೋಲ್ ಆಗುತ್ತಿವೆ. ಅವರು ಆಹಾರ, ಸ್ಪೂನ್ ಮಾತ್ರ ಏಕೆ ತೆಗೆದುಕೊಂಡು ಹೋಗುತ್ತಾರೆ, ಬೇಕಾದರೆ ಮನೆಯಿಂದ ಕುರ್ಚಿ, ಮೇಜು, ಬೆಡ್ ನ್ನು ತೆಗೆದುಕೊಂಡು ಹೋಗಲಿ, ಬೇರೆಯವರು ಬಳಸಿದ ವಸ್ತುಗಳು ಅವರಿಗೆ ಅಪಥ್ಯವಾಗುತ್ತದೆಯಲ್ಲವೇ ಎಂದು ಹಲವರು ಟೀಕೆ ಮಾಡಿದರೆ ಇನ್ನು ಕೆಲವರು ಸುಧಾಮೂರ್ತಿಯವರು ತಮ್ಮ ಮನೆಯನ್ನೇ ವಿದೇಶಕ್ಕೆ ಹೋಗುವಾಗ ಒಯ್ಯುತ್ತಾರೇನೋ ಎಂದು ಟೀಕಿಸಿದ್ದಾರೆ. 

ಸುಧಾ ಮೂರ್ತಿಯವರು ತಾವು ಸರಳ ವ್ಯಕ್ತಿತ್ವ ಹೊಂದಿದವರು ಎಂದು ಅಗತ್ಯಕ್ಕಿಂತ ಹೆಚ್ಚು ತೋರ್ಪಡಿಸಿಕೊಳ್ಳುತ್ತಿದ್ದಾರೆ ಎಂದು ಇನ್ನು ಕೆಲವರು ಬರೆದಿದ್ದಾರೆ. 

ಇತ್ತೀಚೆಗೆ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿದ್ದಾಗ ಮಾಂಸದ ಕಟ್ಲೆಟ್ ಕೈಯಲ್ಲಿ ಹಿಡಿದಿರುವ ಫೋಟೋ ವೈರಲ್ ಆಗಿತ್ತು. ಅದನ್ನು ಇಟ್ಟುಕೊಂಡು ಸುಧಾ ಮೂರ್ತಿಯವರನ್ನು ಟ್ರೋಲ್ ಮಾಡುತ್ತಿದ್ದಾರೆ. ನೀವು ನಿಮ್ಮ ಅತ್ತೆಗೆ ಬೇರೆ ಶುದ್ಧ ಸಸ್ಯಾಹಾರಿ ಕಟ್ಲೆಟ್ ಮಾಡಿ ಕೊಡುತ್ತೀರೋ, ನಿಮ್ಮ ಮಕ್ಕಳಿಗೆ ಅಜ್ಜಿಯನ್ನು ಮುಟ್ಟಲು ಬಿಡುವುದಿಲ್ಲವೇ ಎಂದೆಲ್ಲ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com