ನವದೆಹಲಿ: ಲೋಕಸಭೆ ಮತ್ತು ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಭಾರತೀಯ ಜನತಾ ಪಕ್ಷವು ಆಡಳಿತಾತ್ಮಕ ಬದಲಾವಣೆ ಮಾಡಿದೆ. ಪಕ್ಷವು ಕೇಂದ್ರ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಕರ್ನಾಟಕದ ಸಿ.ಟಿ ರವಿ ಅವರಿಗೆ ಕೊಕ್ ನೀಡಿದೆ.
13 ನಾಯಕರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಿ.ಎಲ್. ಸಂತೋಷ್ ಅವರನ್ನು ಮುಂದುವರೆಸಲಾಗಿದೆ.
ತೆಲಂಗಾಣದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬಂಡಿ ಸಂಜಯ್ ಅವರನ್ನು ಇತ್ತೀಚೆಗೆ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಲಾಗಿತ್ತು.
ಇತರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೆಂದರೆ ಅರುಣ್ ಸಿಂಗ್, ಕೈಲಾಶ್ ವಿಜಯ್ ವರ್ಗೀಯ, ದುಷ್ಯಂತ ಕುಮಾರ್ ಗೌತಮ್, ತರುಣ್ ಚುಗ್, ವಿನೋದ್ ತಾವ್ಡೆ, ಸುನಿಲ್ ಬನ್ಸಲ್, ರಾಧಾಮೋಹನ್ ಅಗರ್ವಾಲ್. ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿ ಶಿವ ಪ್ರಕಾಶ್ ಅವರನ್ನು ಮುಂದುವರಿಸಲಾಗಿದೆ. ಸಂಘಟನಾ ಕಾರ್ಯದರ್ಶಿಗಳು, ಸಹ ಸಂಘಟನಾ ಕಾರ್ಯದರ್ಶಿಗಳು ಕೊಶಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಕೇಂದ್ರೀಯ ಪದಾಧಿಕಾರಿ ಹುದ್ದೆಯಿಂದ ರವಿ ಅವರನ್ನು ಕೆಳಗಿಳಿಸಿದ ಹಿಂದೆ ರಾಜ್ಯಾಧ್ಯಕ್ಷ ಹುದ್ದೆ ಕೊಡುವ ಉದ್ದೇಶವಿದೆ ಎನ್ನಲಾಗಿದೆ. ಕಳೆದೆರಡು ತಿಂಗಳಿನಿಂದ ಚರ್ಚೆಯ ವಿಷಯವಾಗಿರುವ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಹುದ್ದೆ ಸಮಸ್ಯೆ ಸದ್ಯದಲ್ಲೇ ಬಗೆಹರಿಯುವ ಲಕ್ಷಣ ಗೋಚರಿಸುತ್ತಿದೆ. ಸದ್ಯದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕೃತ ಅವಧಿ ಕಳೆದ ಸಪ್ಟೆಂಬರ್ ಗೆ ಅಂತ್ಯವಾಗಿದೆ. ಆದರೆ ಚುನಾವಣೆಯ ಹಿನ್ನೆಲೆಯಲ್ಲಿ ಅವರನ್ನೇ ಮುಂದುವರಿಸಲಾಗಿತ್ತು.
13 ಉಪಾಧ್ಯಕ್ಷರು, ಒಂಬತ್ತು ಪ್ರಧಾನ ಕಾರ್ಯದರ್ಶಿಗಳು, ಸಂಘಟನೆಯ ಉಸ್ತುವಾರಿ ಬಿ ಎಲ್ ಸಂತೋಷ್ ಸೇರಿದಂತೆ 13 ಕಾರ್ಯದರ್ಶಿಗಳು ಪಟ್ಟಿಯಲ್ಲಿದ್ದಾರೆ. ಬಿಹಾರದ ಲೋಕಸಭಾ ಸಂಸದ, ಮಾಜಿ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ಕೈಬಿಡಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟೋನಿ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
Advertisement