ಜೋಧ್‌ಪುರ: ಸೇನಾ ಕ್ವಾಟರ್ಸ್ ನಲ್ಲಿ ಯೋಧನ ಪತ್ನಿ, ಮಗಳು ನಿಗೂಢ ಸಾವು

ರಾಜಸ್ಥಾನದ ಜೋಧ್‌ಪುರದಲ್ಲಿರುವ ಸೇನಾ ಕ್ವಾಟರ್ಸ್ ನಲ್ಲಿ ಭಾನುವಾರ ಬೆಳಗ್ಗೆ ಯೋಧರೊಬ್ಬರ ಪತ್ನಿ ಮತ್ತು ಮಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೋಧ್‌ಪುರ: ರಾಜಸ್ಥಾನದ ಜೋಧ್‌ಪುರದಲ್ಲಿರುವ ಸೇನಾ ಕ್ವಾಟರ್ಸ್ ನಲ್ಲಿ ಭಾನುವಾರ ಬೆಳಗ್ಗೆ ಯೋಧರೊಬ್ಬರ ಪತ್ನಿ ಮತ್ತು ಮಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

25 ವರ್ಷದ ರುಕ್ಮೀನಾ ಮತ್ತು ಆಕೆಯ ಎರಡು ವರ್ಷದ ಮಗಳು ರಿದ್ಧಿಮಾ ಅವರು ಹಾಸಿಗೆಯ ಮೇಲೆ ಸಜೀವವಾಗಿ ದಹನವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಅಗ್ನಿ ಅವಘಡದಲ್ಲಿ ಪತ್ನಿ ಮತ್ತು ಮಗಳು ಸಾವನ್ನಪ್ಪಿದ್ದಾರೆ ಎಂದು ರುಕ್ಮೀನಾ ಅವರ ಪತಿ ಯೋಧ ರಾಮ್ ಪ್ರಸಾದ್ ಅವರು ಹೇಳಿದ್ದಾರೆ. ರಾಮ್ ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಮತ್ತು ಅವರು ಜೋಧ್‌ಪುರಕ್ಕೆ ಆಗಮಿಸಿದನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಉಪ ಕಮಿಷನರ್(ಪೂರ್ವ) ಅಮೃತ ದುವಾಹ್ನ್ ಅವರು ಹೇಳಿದ್ದಾರೆ.

ಸಿಕ್ಕಿಂ ಮೂಲದ ರಾಮ್ ಪ್ರಸಾದ್ ಅವರು ನೇಪಾಳ ಮೂಲದ ರುಕ್ಮೀನಾ ಅವರನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಭಾರತೀಯ ಸೇನೆಯಲ್ಲಿ ನಾಯಕ್ ಆಗಿರುವ ರಾಮ್ ಪ್ರಸಾದ್ ಅವರು, ಎರಡು ವರ್ಷಗಳ ಹಿಂದೆ ಕುಟುಂಬ ಸಮೇತ ಜೋಧ್‌ಪುರಕ್ಕೆ ತೆರಳಿ ಮಿಲಿಟರಿ ಕ್ವಾಟರ್ಸ್ ನಲ್ಲಿ ವಾಸವಾಗಿದ್ದರು.

"ಭಾನುವಾರ ಬೆಳಗ್ಗೆ 5 ಗಂಟೆಗೆ ಆರ್ಮಿ ಕ್ವಾಟರ್ಸ್ ನಲ್ಲಿ ಇಬ್ಬರು ಸುಟ್ಟು ಕರಕಲಾದ ಬಗ್ಗೆ ನಮಗೆ ಮಾಹಿತಿ ಬಂದಿತು. ನಾವು ಸ್ಥಳಕ್ಕೆ ಧಾವಿಸಿ ನೋಡಿದಾಗ ಮಹಿಳೆ ಮತ್ತು ಅವರ ಮಗಳು ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಹಾಸಿಗೆಯ ಮೇಲೆ ಮಲಗಿರುವುದು ಪತ್ತೆಯಾಗಿದೆ" ಎಂದು ದುಹಾನ್ ಅವರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ರಾಮ್ ಪ್ರಸಾದ್ ಅವರು ತಮ್ಮ ಹೆಂಡತಿ ಮತ್ತು ಅವರ ಮಗಳನ್ನು ಉಳಿಸಲು ಪ್ರಯತ್ನಿಸಿದನು. ಆದರೆ ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ರಾಮ್ ಪ್ರಸಾದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ರತನಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ದುಹಾನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com